ADVERTISEMENT

ಪಶ್ಚಿಮ ಬಂಗಾಳ ಚುನಾವಣೆ: ಭದ್ರಕೋಟೆ ಮರಳುವುದೇ ಸಿಪಿಎಂ ಮಡಿಲಿಗೆ?

ಕೋಲ್ಕತ್ತದ ಜಾಧವಪುರದಲ್ಲಿ ಟಿಎಂಸಿ, ಬಿಜೆಪಿ, ಸಿಪಿಎಂ ಈಗ ತ್ರಿಕೋನ ಸ್ಪರ್ಧೆ

ಶೋಮು ದಾಸ್‌
Published 8 ಏಪ್ರಿಲ್ 2021, 19:31 IST
Last Updated 8 ಏಪ್ರಿಲ್ 2021, 19:31 IST
ಸಿಪಿಎಂ
ಸಿಪಿಎಂ   

ಕೋಲ್ಕತ್ತ: ಕೋಲ್ಕತ್ತದ ಜಾಧವಪುರ ವಿಧಾನಸಭಾ ಕ್ಷೇತ್ರವು ಈ ಚುನಾವಣೆಯಲ್ಲಿ ಹೆಚ್ಚು ಕುತೂಹಲ ಹುಟ್ಟಿಸಿರುವ ಕ್ಷೇತ್ರಗಳಲ್ಲಿ ಒಂದು. ಸಿಪಿಎಂನ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಟಿಎಂಸಿ ಮತ್ತು ಬಿಜೆಪಿ ಈಗ ಗಟ್ಟಿಯಾಗಿ ನೆಲೆಯೂರುತ್ತಿವೆ. ಕೋಲ್ಕತ್ತ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಪಿಎಂ ತೆಕ್ಕೆಯಲ್ಲಿರುವ ಏಕೈಕ ಕ್ಷೇತ್ರವಿದು. ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದು, ಸಿಪಿಎಂನ ಅಸ್ತಿತ್ವದ ಪ್ರಶ್ನೆಯೂ ಆಗಿದೆ.

1967ರಿಂದ 2006ರ ಚುನಾವಣೆವರೆಗೂ ಸಿಪಿಎಂ ಜಾಧವಪುರ ಕ್ಷೇತ್ರವನ್ನು ಗೆದ್ದಿತ್ತು. 2011ರಲ್ಲಿ ಸಿಪಿಎಂನ ಬುದ್ಧದೇವ ಭಟ್ಟಾಚಾರ್ಯ ಅವರು (ಪಶ್ಚಿಮ ಬಂಗಾಳದ ಆಗಿನ ಮುಖ್ಯಮಂತ್ರಿ) ಟಿಎಂಸಿಯ ಮನೀಷ್ ಗುಪ್ತಾ ಎದುರು ಸೋತಿದ್ದರು. ರಾಜ್ಯದಾದ್ಯಂತ ಟಿಎಂಸಿ ಪರ ಅಲೆ ಜೋರಾಗಿದ್ದ ಸಂದರ್ಭದಲ್ಲಿ ಸಿಪಿಎಂ ತನ್ನ ಭದ್ರಕೋಟೆಯನ್ನೇ ಕಳೆದುಕೊಂಡಿತ್ತು. ಆದರೆ 2016ರ ಚುನಾವಣೆಯಲ್ಲಿ ಸಿಪಿಎಂ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಸಿಪಿಎಂನ ಸುಜನ್ ಚಕ್ರವರ್ತಿ ಅವರು 14,000ಕ್ಕೂ ಹೆಚ್ಚು ಮತಗಳ ಅಂತರದಿಂದ ಟಿಎಂಸಿಯ ಮನೀಷ್ ಗುಪ್ತಾ ಅವರನ್ನು ಸೋಲಿಸಿದ್ದರು. ಈ ಅಂತರ ನಗಣ್ಯ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಈ ಕ್ಷೇತ್ರದ ಮೇಲೆಸಿಪಿಎಂ ಹಿಡಿತ ಸಡಿಲವಾಗುತ್ತಿರುವುದನ್ನು 2019ರ ಲೋಕಸಭಾ ಚುನಾವಣೆಯ ಫಲಿತಾಂಶವು ಎತ್ತಿಹಿಡಿದಿತ್ತು. ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸಿದರೆ, ಬಿಜೆಪಿ ಹೆಚ್ಚು ಮತ ಪಡೆದ ಎರಡನೇ ಪಕ್ಷ ಎನಿಸಿಕೊಂಡಿತು. ಆದರೆ ಸಿಪಿಎಂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ADVERTISEMENT

ಈಗಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಸುಜನ್ ಚಕ್ರವರ್ತಿ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಟಿಎಂಸಿ ಮತ್ತು ಬಿಜೆಪಿ ಪ್ರಚಾರ ನಡೆಸುತ್ತಿವೆ. ‘ಸುಜನ್ ಅವರು ಜನರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿಯೇ ಇಲ್ಲ. ಆದ್ದರಿಂದಲೇ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ ಹೆಚ್ಚು ಮತ ಹಾಕಿದರು. ಹೀಗಾಗಿ ಈ ಬಾರಿ ಇಲ್ಲಿ ಬಿಜೆಪಿಯೇ ಗೆಲ್ಲುತ್ತದೆ’ ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.

‘ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸಿಪಿಎಂ ಮತ್ತು ಸುಜನ್ ಚಕ್ರವರ್ತಿ ಅವರು ಜನರ ಕಷ್ಟಗಳಿಗೆ ಸ್ಪಂದಿಸಿದ್ದರು. ಸಿಪಿಎಂ ಆರಂಭಿಸಿದ್ದ ಶ್ರಮಜೀವಿ ಕ್ಯಾಂಟೀನ್‌ ಹೆಚ್ಚು ಜನಪ್ರಿಯತೆ ಪಡೆದಿದೆ. ಹೀಗಾಗಿ ಈ ಬಾರಿ ಇಲ್ಲಿ ಸಿಪಿಎಂ ಗೆಲ್ಲಲಿದೆ’ ಎಂದು ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಿಪಿಎಂ ಶತಾಯಗತಾಯ ಹೋರಾಡುತ್ತಿದೆ. ಈವರೆಗೆ ಇಲ್ಲಿ ಸಿಪಿಎಂ ಮತ್ತು ಟಿಎಂಸಿ ಮಧ್ಯೆ ಮಾತ್ರ ಸ್ಪರ್ಧೆ ಇತ್ತು. ಈಗ ಬಿಜೆಪಿ ಸಹ ಪೈಪೋಟಿಗೆ ಇಳಿದಿದೆ. ನೆರೆಯ ದೇಶಗಳಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ ಪೌರತ್ವ ನೀಡುತ್ತೇವೆ ಎಂದು ಬಿಜೆಪಿ ಇಲ್ಲಿ ಪ್ರಚಾರ ನಡೆಸುತ್ತಿದೆ. ಬಾಂಗ್ಲಾದೇಶದಿಂದ ವಲಸೆ ಬಂದಿರುವ ಮತುವಾ ಹಿಂದುಗಳ ಸಂಖ್ಯೆ ಈ ಕ್ಷೇತ್ರದಲ್ಲಿ ದೊಡ್ಡದಿದೆ. ಹೀಗಾಗಿ ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಿಪಿಎಂನ ಹೋರಾಟ, ದಿನೇ ದಿನೇ ಕಠಿಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.