ADVERTISEMENT

ಅತ್ಯಾಚಾರವೆಸಗಿ ತಂಗಿಯನ್ನೇ ಕೊಂದ ಮಗನಿಗೆ ಪ್ರಕರಣ ಮುಚ್ಚಿಹಾಕಲು ನೆರವಾದ ತಾಯಿ

ಪಿಟಿಐ
Published 27 ಜುಲೈ 2024, 13:43 IST
Last Updated 27 ಜುಲೈ 2024, 13:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರೇವಾ (ಮಧ್ಯಪ್ರದೇಶ): ಮಧ್ಯಪ್ರದೇಶದ ರೇವಾದಲ್ಲಿ ಏಪ್ರಿಲ್‌ 24ರಂದು ವರದಿಯಾಗಿದ್ದ 9 ವರ್ಷ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಬಾಲಕಿಯ ಮೇಲೆ ಆಕೆಯ ಸಹೋದರನೇ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಈ ಪ್ರಕರಣವನ್ನು ಮುಚ್ಚಿಹಾಕಲು ಆತನ ತಾಯಿ ಹಾಗೂ ಇಬ್ಬರು ಸಹೋದರಿಯರು ನೆರವಾಗಿದ್ದಾರೆ ಎಂಬ ಸಂಗತಿ ತನಿಖೆ ವೇಳೆ ಬಹಿರಂಗವಾಗಿದೆ.

ವಿಚಾರಣೆ ಬಳಿಕ ಸಂತ್ರಸ್ತೆಯ ಸಹೋದರ, ತಾಯಿ ಮತ್ತು ಇಬ್ಬರು ಅಕ್ಕಂದಿರನ್ನು (17 ಮತ್ತು 18 ವರ್ಷ) ಬಂಧಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿವೇಕ್‌ ಸಿಂಗ್‌, '9 ವರ್ಷದ ಬಾಲಕಿ ಮೃತಪಟ್ಟಿರುವುದು ಜಾವಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಏಪ್ರಿಲ್‌ 24ರಂದು ವರದಿಯಾಗಿತ್ತು. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಬಾಲಕಿಯ ಶವವನ್ನು ಆಕೆಯ ಮನೆಯಲ್ಲೇ ವಶಕ್ಕೆ ಪಡೆಯಲಾಗಿತ್ತು. ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ಹಾಗೂ ಕೊಲೆ ಮಾಡಿರುವುದು ಶವಪರೀಕ್ಷೆಯಿಂದ ತಿಳಿದುಬಂದಿತ್ತು. ನಂತರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು' ಎಂದು ಹೇಳಿದ್ದಾರೆ.

ADVERTISEMENT

'ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ನಡೆದ ರಾತ್ರಿ ಸಂತ್ರಸ್ತೆಯೊಂದಿಗೆ ಆಕೆಯ 13 ವರ್ಷದ ಸಹೋದರ ಮಲಗಿದ್ದ ಎಂಬುದು ಗೊತ್ತಾಯಿತು. ಆತ, ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊಗಳನ್ನು ನೋಡಿ ತನ್ನ ಸಹೋದರಿಯ ಮೇಲೆ ಅತ್ಯಾಚಾರವೆಸಗಿದ್ದ. ಸಂತ್ರಸ್ತೆಯು ಈ ವಿಚಾರವನ್ನು ತಂದೆಗೆ ಹೇಳುತ್ತೇನೆ ಎಂದಾಗ, ಕತ್ತು ಹಿಸುಕಿ ಉಸಿರುಗಟ್ಟಿಸಿದ್ದ. ನಂತರ, ನಡೆದದ್ದೆಲ್ಲವನ್ನು ತಾಯಿಗೆ ತಿಳಿಸಿದ್ದ. ಆಕೆ ಬಂದು ನೋಡಿದಾಗ, ಬಾಲಕಿ ಜೀವಂತವಾಗಿದ್ದಳು. ಬಳಿಕ, ಆರೋಪಿಯು ಮತ್ತೊಮ್ಮೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದ' ಎಂದು ಮಾಹಿತಿ ನೀಡಿದ್ದಾರೆ.

ಈ ಘಟನೆ ನಡೆದಾಗ ಆರೋಪಿಯ ಇಬ್ಬರು ಸಹೋದರಿಯರೂ ಎಚ್ಚರಗಾಗಿದ್ದರು. ಪ್ರಕರಣದ ದಿಕ್ಕು ತಪ್ಪಿಸಲು ಯೋಜಿಸಿದ್ದ ಆರೋಪಿಗಳು, ಪೊಲೀಸರಿಗೆ ವಿಚಾರ ಮುಟ್ಟಿಸುವ ಮುನ್ನ, ತಾವು ಮಲಗಿದ್ದ ಹಾಸಿಗೆಯನ್ನು ಬದಲಿಸಿದ್ದರು ಎಂದು ಸಿಂಗ್‌ ವಿವರಿಸಿದ್ದಾರೆ.

ಆರೋಪಿಗಳು ಪೊಲೀಸರನ್ನು ವಂಚಿಸುವುದಕ್ಕಾಗಿ ಬಾಲಕಿಗೆ ವಿಷಜಂತು ಕಚ್ಚಿರಬಹುದು ಎಂದು ಹೇಳಿದ್ದರು. ಆದರೆ, ಅದಕ್ಕೆ ಪೂರಕವಾದ ಯಾವುದೇ ಗುರುತುಗಳು ಶವದ ಮೇಲೆ ಕಾಣಿಸಿರಲಿಲ್ಲ. ಹೀಗಾಗಿ, ವಿಚಾರಣೆ ಮುಂದುವರಿಸಲಾಗಿತ್ತು. ಸುಮಾರು 50 ಜನರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಕುಟುಂಬದವರು ಮೇಲಿಂದ ಮೇಲೆ ಹೇಳಿಕೆಗಳನ್ನು ಬದಲಿಸುತ್ತಿದ್ದರು. ಇದು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು. ಅದರಂತೆ ವಿಚಾರಣೆ ತೀವ್ರಗೊಳಿಸಿದಾಗ ಕೃತ್ಯವೆಸಗಿರುವುದನ್ನು ಒಪ್ಪಿಕೊಂಡರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.