ADVERTISEMENT

ಕೃಷಿ ಕಾಯ್ದೆ; ದುರಹಂಕಾರ ಪ್ರದರ್ಶಿಸಿರುವ ಕೇಂದ್ರ: ಸೋನಿಯಾ ಗಾಂಧಿ

ಚರ್ಚೆಗೆ ಅವಕಾಶ ನೀಡದ ಸರ್ಕಾರ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ವಾಗ್ದಾಳಿ

ಪಿಟಿಐ
Published 22 ಜನವರಿ 2021, 7:31 IST
Last Updated 22 ಜನವರಿ 2021, 7:31 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ‘ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸ್ಪಂದಿಸದೆ ದುರಂಹಕಾರದಿಂದ ವರ್ತಿಸಿದೆ’ ಎಂದು ಟೀಕಿಸಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಸಭೆಯಲ್ಲಿ ಮಾತನಾಡಿದ ಅವರು, ‘ಮೂರು ಕೃಷಿ ಕಾಯ್ದೆಗಳನ್ನು ಆತುರದಲ್ಲಿ ಸಿದ್ಧಪಡಿಸಲಾಗಿದೆ ಮತ್ತು ಉದ್ದೇಶಪೂರ್ವಕವಾಗಿಯೇ ಸಂಸತ್‌ನಲ್ಲಿ ಚರ್ಚೆಗೆ ಹಾಗೂ ಪರಿಶೀಲನೆಗೆ ಅವಕಾಶ ನೀಡಲಿಲ್ಲ’ ಎಂದು ದೂರಿದ್ದಾರೆ.

‘ರೈತರ ಪ‍್ರತಿಭಟನೆ ಮುಂದುವರಿದಿದೆ. ಆದರೆ, ಸರ್ಕಾರ ಸೂಕ್ಷ್ಮತೆಯನ್ನೇ ಪ್ರದರ್ಶಿಸಲಿಲ್ಲ. ಕೇವಲ ನಾಟಕೀಯ ಸಮಾಲೋಚನೆಗಳನ್ನು ನಡೆಸಿತು. ಈ ಕಾಯ್ದೆಗಳನ್ನು ಕಾಂಗ್ರೆಸ್‌ ಒಪ್ಪಿಕೊಂಡಿರಲಿಲ್ಲ. ಈ ಕೃಷಿ ಕಾಯ್ದೆಗಳು ಆಹಾರ ಭದ್ರತೆ ಮೂರು ಅಡಿಪಾಯಗಳಾದ ಕನಿಷ್ಠ ಬೆಂಬಲ ಬೆಲೆ, ಸಾರ್ವಜನಿಕವಾಗಿ ಸಂಗ್ರಹಿಸುವ ವ್ಯವಸ್ಥೆ ಮತ್ತು ಸಾರ್ವಜನಿಕವಾಗಿ ವಿತರಣೆ ವ್ಯವಸ್ಥೆಯನ್ನೇ ನಾಶಪಡಿಸಲಿವೆ’ ಎಂದು ಹೇಳಿದ್ದಾರೆ.

ADVERTISEMENT

‘ಬಜೆಟ್‌ ಅಧಿವೇಶನದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದಂತೆ ಚರ್ಚಿಸಲು ಹಲವು ವಿಷಯಗಳಿವೆ. ಆದರೆ, ಸರ್ಕಾರ ಚರ್ಚೆ ನಡೆಸಲು ಒಪ್ಪುತ್ತದೆಯೇ ಅಥವಾ ಇಲ್ಲವೋ ನೋಡಬೇಕಾಗಿದೆ’ ಎಂದಿದ್ದಾರೆ.

ಬಾಲಕೋಟ ದಾಳಿ ಬಗ್ಗೆ ಮಾಹಿತಿ ಸೋರಿಕೆಯಾಗಿದೆ ಎನ್ನಲಾದ ವಿಷಯವನ್ನು ಪ್ರಸ್ತಾಪಿಸಿರುವ ಅವರು, ‘ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಸರ್ಕಾರ ರಾಜಿಯಾಗಿರುವುದು ವರದಿಯಾಗಿದೆ. ಆದರೆ, ಸರ್ಕಾರ ಈ ವಿಷಯದಲ್ಲಿ ಮೌನವಾಗಿದೆ. ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಪ್ರಮಾಣಪತ್ರ ನೀಡುತ್ತಿದ್ದ ವ್ಯಕ್ತಿಗಳ ನಿಜವಾದ ನಿಲುವು ಈಗ ಬಹಿರಂಗಗೊಂಡಿದೆ’ ಎಂದು ಟೀಕಿಸಿದ್ದಾರೆ.

‘ಕೋವಿಡ್‌–19 ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದ್ದರಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಕಷ್ಟಗಳಿಂದ ಪಾರಾಗಿ ಹೊರಗೆ ಬರಲು ಇನ್ನೂ ಹಲವು ವರ್ಷಗಳು ಬೇಕಾಗುತ್ತದೆ. ಅರ್ಥಿಕ ಪರಿಸ್ಥಿತಿಯೂ ದುಸ್ಥಿತಿಯಲ್ಲಿದೆ. ಎಂಎಸ್‌ಎಂಇ ಸೇರಿದಂತೆ ಹಲವು ಕ್ಷೇತ್ರಗಳು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ, ಸರ್ಕಾರ ಸಮರ್ಪಕವಾಗಿ ನೆರವು ನೀಡಲು ಮುಂದಾಗಿಲ್ಲ’ ಎಂದು ಹೇಳಿದ್ದಾರೆ.

‘ಖಾಸಗೀಕರಣದ ವ್ಯಾಮೋಹದಲ್ಲಿ ಸರ್ಕಾರ ಸಿಲುಕಿಕೊಂಡಿದೆ. ಈ ನಿಲುವು ಒಪ್ಪಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.