ADVERTISEMENT

ಡ್ರಗ್ಸ್‌ ಪ್ರಕರಣ: ಆರ್ಯನ್‌ ಖಾನ್‌ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಅಕ್ಟೋಬರ್ 2021, 13:34 IST
Last Updated 26 ಅಕ್ಟೋಬರ್ 2021, 13:34 IST
ಆರ್ಯನ್‌ ಖಾನ್‌ ಬಿಡುಗಡೆಗೆ ನಟ ಶಾರುಕ್‌ ಖಾನ್‌ ಅವರ ಅಭಿಮಾನಿಗಳು ಮುಂಬೈನಲ್ಲಿ ಒತ್ತಾಯಿಸಿದರು
ಆರ್ಯನ್‌ ಖಾನ್‌ ಬಿಡುಗಡೆಗೆ ನಟ ಶಾರುಕ್‌ ಖಾನ್‌ ಅವರ ಅಭಿಮಾನಿಗಳು ಮುಂಬೈನಲ್ಲಿ ಒತ್ತಾಯಿಸಿದರು   

ಮುಂಬೈ: ಡ್ರಗ್ಸ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಆರ್ಯನ್‌ ಖಾನ್‌ ಜಾಮೀನು ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ ನಾಳೆಗೆ ಮುಂದೂಡಿದೆ‌.

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಕ್‌ ಖಾನ್‌ ಅವರ ಮಗ ಆರ್ಯನ್‌ ಖಾನ್‌ ಮತ್ತು ಇತರರು ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಇಂದು ಆರ್ಯನ್‌ ಖಾನ್‌ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌, ವಿಚಾರಣೆಯನ್ನು ನಾಳೆಯೂ ಮುಂದುವರಿಸಲಿದೆ. ನಾಳೆ ಮಧ್ಯಾಹ್ನ 2:30ರಿಂದ ಮತ್ತೆ ವಿಚಾರಣೆ ನಡೆಯಲಿದೆ ಎಂದು ನ್ಯಾಯಮೂರ್ತಿ ನಿತಿನ್‌ ಸಾಂಬ್ರೆ ಹೇಳಿದ್ದಾರೆ.

ಆರ್ಯನ್‌ ಅವರನ್ನು ಎನ್‌ಸಿಬಿ ಅಕ್ಟೋಬರ್‌ 2ರಂದು ವಶಕ್ಕೆ ಪಡೆದಿತ್ತು.

ADVERTISEMENT

ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಮನೀಶ್‌ ರಾಜಗರಿಯಾ ಮತ್ತು ಅವಿನ್‌ ಸಾಹು ಅವರಿಗೆ ನಗರದ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯವು ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಆರೋಪಿಗಳಿಗೆ ಜಾಮೀನು ದೊರೆತಿದೆ.

ಈವರೆಗೂ ಪ್ರಕರಣದಲ್ಲಿ ನೈಜೀರಿಯಾದ ಇಬ್ಬರು ಸೇರಿದಂತೆ ಒಟ್ಟು 20 ಜನರನ್ನು ಎನ್‌ಸಿಬಿ ಬಂಧಿಸಿದೆ.

ಪ್ರಕರಣದಲ್ಲಿ ಸಾಕ್ಷಿಧಾರನಾಗಿರುವ ಪ್ರಭಾಕರ್‌ ಸೈಲ್‌, ಎನ್‌ಸಿಬಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಆರ್ಯನ್‌ ಖಾನ್‌ ಬಿಡುಗಡೆ ₹25 ಕೋಟಿ ಡೀಲ್‌ ನಡೆದಿತ್ತು ಎಂದಿದ್ದರು. ಭ್ರಷ್ಟಾಚಾರದ ಆರೋಪಗಳ ಸಂಬಂಧ ತನಿಖೆ ನಡೆಸಲು ದೆಹಲಿಯಿಂದ ಎನ್‌ಸಿಬಿಯ ಐವರು ಸದಸ್ಯರ ತಂಡವು ನಾಳೆ ಮುಂಬೈಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.