ADVERTISEMENT

ಶಾರುಕ್‌ ಖಾನ್‌ರಿಂದ ಲಂಚಕ್ಕೆ ಬೇಡಿಕೆ ಆರೋಪ: ವಿಶೇಷ ಕೋರ್ಟ್‌ ಮೊರೆ ಹೋದ ಎನ್‌ಸಿಬಿ

ಪಿಟಿಐ
Published 25 ಅಕ್ಟೋಬರ್ 2021, 12:50 IST
Last Updated 25 ಅಕ್ಟೋಬರ್ 2021, 12:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಕ್‌ ಖಾನ್ ಅವರಿಂದ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಮತ್ತು ಅದರ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ ಅವರು ಇಲ್ಲಿನ ವಿಶೇಷ ನ್ಯಾಯಾಲಯವೊಂದರ ಮೊರೆ ಹೋಗಿದ್ದಾರೆ.

‘ಈ ಪ್ರಕರಣದ ತನಿಖೆಯಲ್ಲಿಅಡ್ಡಿ ಉಂಟುಮಾಡಲು ಮತ್ತು ತನಿಖೆಯ ಹಾದಿತಪ್ಪಿಸುವ ಪ್ರಯತ್ನ ನಡೆದಿದೆ‘ ಎಂದು ಎನ್‌ಸಿಬಿ ಮತ್ತು ವಾಂಖೆಡೆ ಅವರು ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ವಾಂಖೆಡೆ ಅವರು ಬಲವಾಗಿ ನಿರಾಕರಿಸಿದ್ದಾರೆ, ಸಾಕ್ಷ್ಯಗಳಲ್ಲಿ ಅಥವಾ ತನಿಖೆಯಲ್ಲಿ ಯಾವುದೇ ತಿದ್ದುಪಡಿ ಆಗದಂತೆ ಎಚ್ಚರ ವಹಿಸಬೇಕು ಎಂದು ಎನ್‌ಸಿಬಿ ಕೇಳಿಕೊಂಡಿದೆ.

ADVERTISEMENT

ಡ್ರಗ್ಸ್‌ ಪ್ರಕರಣದ ಸಾಕ್ಷಿ ಪ್ರಭಾಕರ ಸೈಲ್‌ ಅವರು ಭಾನುವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಆರ್ಯನ್‌ ಖಾನ್‌ ಬಿಡುಗಡೆಗೆ ಎನ್‌ಸಿಬಿಯ ಅಧಿಕಾರಿಯೊಬ್ಬರು ಮತ್ತು ತಲೆಮರೆಸಿಕೊಂಡಿರುವ ಕೆ.ಪಿ.ಗೋಸಾವಿ ಸಹಿತ ಇತರ ವ್ಯಕ್ತಿಗಳು ₹ 25 ಕೋಟಿ ಲಂಚ ಕೇಳಿದ್ದರು ಎಂದು ಆರೋಪಿಸಿದ್ದರು.

ಇದೇವೇಳೆ, ಎನ್‌ಸಿಬಿ ಕೂಡ ವಾಂಖೆಡೆಯನ್ನು ಬೆಂಬಲಿಸಿ ಅಫಿಡವಿಟ್ ಸಲ್ಲಿಸಿದ್ದು, ಪ್ರಕರಣದ ಸ್ವತಂತ್ರ ಸಾಕ್ಷಿ ಪ್ರಭಾಕರ್ ಸೈಲ್ ಅವರ ಆರೋಪಗಳನ್ನು ನಿರಾಕರಿಸಿದೆ.

ಅಫಿಡವಿಟ್‌ನಲ್ಲಿ, ತನ್ನ ಮತ್ತು ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ‘ವೈಯಕ್ತಿಕ ಸೇಡು’ ತೀರಿಸಿಕೊಳ್ಳಲಾಗುತ್ತಿದೆ. ನಮ್ಮ ವಿರುದ್ಧ ಮಾಡಲಾದ ಆರೋಪಗಳು ಸುಳ್ಳು, ಕ್ಷುಲ್ಲಕ ಮತ್ತು ವಿಷಾದಕರವಾದುದ್ದಾಗಿದೆ’ಎಂದು ಸಮೀರ್ ವಾಂಖೆಡೆ ಹೇಳಿದ್ದಾರೆ.

ನನ್ನನ್ನು ಬಂಧಿಸುವ ಮತ್ತು ಸೇವೆಯಿಂದ ವಜಾಗೊಳಿಸುವ ಬೆದರಿಕೆ ಹಾಕಿದ್ದಾರೆ ಎಂದು ವಾಂಖೆಡೆ ತಿಳಿಸಿದ್ದಾರೆ.

ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ತನಿಖೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಇಷ್ಟವಿಲ್ಲವಾದ್ದರಿಂದ ನನಗೆ ಬೆದರಿಕೆ ಹಾಕಲಾಗುತ್ತಿದೆ. ನನ್ನ ಬಂಧನ ಸೇರಿದಂತೆ ನನ್ನ ವಿರುದ್ಧ ಯಾವುದೇ ದೌರ್ಜನ್ಯ ಎಸಗಿದರೂ ಅದನ್ನು ಎದುರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.

ಆಯುಕ್ತರಿಗೆ ಪತ್ರ: ಈ ಪ್ರಕರಣದಲ್ಲಿ ತಮ್ಮನ್ನು ತಪ್ಪಾಗಿ ಆರೋಪಿಯನ್ನಾಗಿ ಮಾಡುವ ಸಾಧ್ಯತೆ ಇದೆ, ಹೀಗಾಗಿ ಸಂಭಾವ್ಯ ಕಾನೂನು ಕ್ರಮಗಳಿಂದ ತಮಗೆ ರಕ್ಷಣೆ ನೀಡಬೇಕು ಎಂದು ಕೋರಿ ಸಮೀರ್‌ ವಾಂಖೆಡೆ ಅವರು ಭಾನುವಾರ ಮುಂಬೈ ಪೊಲೀಸ್ ಆಯುಕ್ತ ಹೇಮಂತ್‌ ನಗ್ರಾಲೆ ಅವರಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.