ಕೇರಳದಲ್ಲಿ ಮಳೆ
-ಪಿಟಿಐ ಚಿತ್ರ
ತಿರುವನಂತಪುರ: ‘ಫೆಂಜಲ್’ ಚಂಡಮಾರುತ ಬಿರುಸುಗೊಂಡಿರುವ ಪರಿಣಾಮ ಕೇರಳದ ನಾಲ್ಕು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿರುವ ಭಾರತೀಯ ಹವಾಮಾನ ಇಲಾಖೆ ಇಂದು (ಸೋಮವಾರ) ‘ರೆಡ್' ಅಲರ್ಟ್’ ಘೋಷಿಸಿದೆ.
ಮಲಪ್ಪುರಂ, ಕೋಯಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ಹಠಾತ್ ಮಳೆಯಿಂದಾಗಿ ಉಂಟಾಗಿದ್ದ ವಿನಾಶಕಾರಿ ಭೂಕುಸಿತದಿಂದ ಚೇತರಿಸಿಕೊಂಡಿರುವ ವಯನಾಡು ಜಿಲ್ಲೆಯಲ್ಲಿ ಮತ್ತೆ ಮಳೆಯಾಗುವ ಎಚ್ಚರಿಕೆ ನೀಡಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಶನಿವಾರ ತಮಿಳುನಾಡು ಕರಾವಳಿಗೆ ಅಪ್ಪಳಿಸಿ ಅನಾಹುತ ಸೃಷ್ಟಿಸಿದ್ದ ‘ಫೆಂಜಲ್’ ಚಂಡಮಾರುತವು ಇದೀಗ ಕರ್ನಾಟಕ ಮತ್ತು ಕೇರಳದತ್ತ ಸಾಗುತ್ತಿದ್ದು, ಎಲ್ಲೆಡೆ ಮಳೆಯಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಪುದುಚೇರಿ ಹಾಗೂ ತಮಿಳುನಾಡಿನ ಕರಾವಳಿ ಭಾಗದ ಕೆಲವು ಜಿಲ್ಲೆಗಳಲ್ಲಿ ‘ಫೆಂಜಲ್’ ಚಂಡಮಾರುತವು ಸುಮಾರು ಆರು ತಾಸು ತನ್ನ ಪ್ರಭಾವ ಬೀರಿತ್ತು. ಪರಿಣಾಮ ತಮಿಳುನಾಡಿನ ವಿಲುಪ್ಪುರಂ ಜಿಲ್ಲೆಯಲ್ಲಿ 50 ಸೆಂ.ಮೀ ಹಾಗೂ ಪುದುಚೇರಿಯಲ್ಲಿ 48 ಸೆಂ.ಮೀನಷ್ಟು ಮಳೆ ಸುರಿದಿದೆ. ಚಂಡಮಾರುತದ ಕಾರಣದಿಂದಾಗಿ ಪುದುಚೇರಿ, ತಮಿಳುನಾಡಿನಲ್ಲಿ ತಲಾ ನಾಲ್ವರು ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.