ADVERTISEMENT

‘ತೌತೆ’: ಮುಂಬೈಯಲ್ಲಿ 22 ಮಂದಿ ಸಾವು, 51 ಜನ ನಾಪತ್ತೆ

ಕರಾವಳಿಯಲ್ಲಿ ಸಿಲುಕಿದ್ದ ‘ಪಿ–305 ಬಾರ್ಜ್‌’ ಹಡಗು l ಸಿಬ್ಬಂದಿಗೆ ಕಂಟಕವಾದ ಚಂಡಮಾರುತ

​ಪ್ರಜಾವಾಣಿ ವಾರ್ತೆ
Published 19 ಮೇ 2021, 18:26 IST
Last Updated 19 ಮೇ 2021, 18:26 IST
ಸಮುದ್ರದಲ್ಲಿ ಸಿಲುಕಿದ್ದ ಪಿ305 ಬಾರ್ಜ್‌ನಲ್ಲಿದ್ದ ಸಿಬ್ಬಂದಿಯನ್ನು ಐಎನ್‌ಎಸ್‌ ಕೊಚ್ಚಿ ನೌಕೆಯ ಮೂಲಕ ರಕ್ಷಿಸಿ ಕರೆತರಲಾಯಿತು ಎಎಫ್‌ಪಿ ಚಿತ್ರ
ಸಮುದ್ರದಲ್ಲಿ ಸಿಲುಕಿದ್ದ ಪಿ305 ಬಾರ್ಜ್‌ನಲ್ಲಿದ್ದ ಸಿಬ್ಬಂದಿಯನ್ನು ಐಎನ್‌ಎಸ್‌ ಕೊಚ್ಚಿ ನೌಕೆಯ ಮೂಲಕ ರಕ್ಷಿಸಿ ಕರೆತರಲಾಯಿತು ಎಎಫ್‌ಪಿ ಚಿತ್ರ   

ಮುಂಬೈ: ತೌತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಮುಂಬೈ ಕರಾವಳಿಯಲ್ಲಿ ಮುಲುಗಿದ ಪಿ–305 ಬಾರ್ಜ್‌ನಲ್ಲಿದ್ದ 22 ಮಂದಿ ಮೃತಪಟ್ಟಿದ್ದು, 53 ಮಂದಿಯ ಸುಳಿವು ಸಿಕ್ಕಿಲ್ಲ. 22 ಸಿಬ್ಬಂದಿಯ ಮೃತದೇಹಗಳನ್ನು ಐಎನ್ಎಸ್ ಕೊಚ್ಚಿ ಸಮರ ನೌಕೆಯು ಬುಧವಾರ ಮುಂಬೈ ಬಂದರಿಗೆ ತಂದಿತು.

ಭಾರತದ ಸಾರ್ವಜನಿಕ ವಲಯದ ತೈಲಶೋಧ ಕಂಪನಿ ಒಎನ್‌ಜಿಸಿ ನಾಲ್ಕು ಹಡಗುಗಳನ್ನು ಅರಬ್ಬಿ ಸಮುದ್ರ ದಲ್ಲಿ ನಿಯೋಜಿಸಿತ್ತು. ಪಿ-305 ಬಾರ್ಜ್, ಜಿಎಎಲ್ ಕನ್‌ಸ್ಟ್ರಕ್ಟರ್ ಬಾರ್ಜ್, ಎಸ್‌ಎಸ್‌ 3 ಮತ್ತು ಸಾಗರ್ ಭೂಷಣ್ ನೌಕೆಗಳು ಅಪಾಯಕ್ಕೆ ಸಿಲುಕಿದ್ದವು.ಪಿ-303 ಬಾರ್ಜ್‌ನಲ್ಲಿದ್ದ 261 ಸಿಬ್ಬಂದಿ ಪೈಕಿ 186 ಜನರನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಐಎನ್‌ಎಸ್ ಕೋಲ್ಕತಾ, ಐಎನ್‌ಎಸ್ ಬೆಟ್ವಾ ಮತ್ತು ಐಎನ್‌ಎಸ್ ಬಿಯಾಸ್ ಯುದ್ಧನೌಕೆಗಳು ಬದುಕುಳಿ ದವರನ್ನು ಹುಡುಕಲು ಮುಂಬೈ ಹೈ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿಸಿವೆ. ಪಿ8ಐ ಕಡಲ ಗಸ್ತು ವಿಮಾನ ಹಾಗೂ ಹೆಲಿಕಾಪ್ಟರ್‌ಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ.

ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ವೆಸ್ಟರ್ನ್ ನೇವಲ್ ಕಮಾಂಡ್, ಅವಿರತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿತು.

ಕಳೆದ ಮೂರು ದಿನಗಳಲ್ಲಿ ಒಎನ್‌ಜಿಸಿಗೆ ಸಂಬಂಧಿಸಿದ 600ಕ್ಕೂ ಹೆಚ್ಚು ಸಿಬ್ಬಂದಿಯನ್ನು ರಕ್ಷಿಸಲಾಗಿದೆ.ಜಿಎಎಲ್ ಕನ್‌ಸ್ಟ್ರಕ್ಟರ್ ಬಾರ್ಜ್‌ನಲ್ಲಿದ್ದಎಲ್ಲ 137 ಜನರನ್ನು ರಕ್ಷಿಸಲಾಗಿದೆ. ಇದಲ್ಲದೆ, ಸಾಗರ್ ಭೂಷಣ್‌ನಲ್ಲಿದ್ದ ಸಪೋರ್ಟ್ ಸ್ಟೇಷನ್ 3 ಮತ್ತು 101ರಲ್ಲಿದ್ದ ಎಲ್ಲ 196 ಕಾರ್ಮಿಕರನ್ನು ಸುರಕ್ಷಿತವಾಗಿ ಕರೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

(ಜೈಪುರ ವರದಿ): ‘ತೌತೆ’ ಪರಿಣಾಮವಾಗಿ ರಾಜಸ್ಥಾನದ ದಕ್ಷಿಣದ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದ ಭಾರಿ ಮಳೆ ಸುರಿದಿದೆ. ಬುಧವಾರವೂ ಮಳೆ ಮುಂದುವರಿದಿದೆ.

ಜೈಪುರದಲ್ಲಿ ಕೂಡ ಬಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತವು ಮಂಗಳವಾರ ರಾತ್ರಿ ರಾಜಸ್ಥಾನ ಪ್ರವೇಶಿಸಿತ್ತು. ವಿವಿಧ ಭಾಗಗಳಲ್ಲಿ ನಷ್ಟಕ್ಕೆ ಇದು ಕಾರಣವಾಗಿದೆ.

ಗುರುವಾರ ಬೆಳಿಗ್ಗಿನ ಹೊತ್ತಿಗೆ ಚಂಡಮಾರುತವು ದುರ್ಬಲಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.