ಧರ್ಮಶಾಲಾ: ಗಾಡೆನ್ ಫೋಡ್ರಾಂಗ್ ಟ್ರಸ್ಟ್‌ಗೆ ಮಾತ್ರ ನನ್ನ ಉತ್ತರಾಧಿಕಾರಿಯನ್ನು ಗುರುತಿಸುವ ಅಧಿಕಾರವಿದೆ ಎಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ತಿಳಿಸಿದ್ದಾರೆ. ಆ ಮೂಲಕ ಉತ್ತರಾಧಿಕಾರಿ ಆಯ್ಕೆಯಲ್ಲಿ ಚೀನಾದ ಹಸ್ತಕ್ಷೇಪವನ್ನು ಬಲವಾಗಿ ತಿರಸ್ಕರಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾನು ಪುನರ್ಜನ್ಮ ಹೊಂದುವುದಾಗಿ ತಿಳಿಸಿದ್ದಾರೆ. ಅಲ್ಲದೇ ಉತ್ತರಾಧಿಕಾರಿಯ ಆಯ್ಕೆಯನ್ನು ಟಿಬೆಟಿಯನ್ ಸಂಪ್ರದಾಯದಂತೆ ಸಂಸ್ಥೆಯು ನಡೆಸಲಿದೆ ಎಂದು ತಿಳಿಸಿದ್ದಾರೆ.
ಜುಲೈ 6ರಂದು 90ನೇ ವಸಂತಕ್ಕೆ ಕಾಲಿಡುತ್ತಿರುವ ದಲೈ ಲಾಮಾ ಅವರು, ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ಲಕ್ಷಾಂತರ ಅನುಯಾಯಿಗಳಲ್ಲಿ ಇದ್ದ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.
ಏತನ್ಮಧ್ಯೆ, ‘ಮುಂದಿನ ದಲೈ ಲಾಮಾ ಪುನರ್ಜನ್ಮ ಪ್ರಕ್ರಿಯೆಯನ್ನು ನಮ್ಮ ಸರ್ಕಾರ ಅನುಮೋದಿಸಬೇಕು ಮತ್ತು ಈ ಪ್ರಕ್ರಿಯೆಯು ಚೀನಾದೊಳಗೆ ನಡೆಯಬೇಕು’ ಎಂದು ಚೀನಾ ಬುಧವಾರ ಹೇಳಿದೆ.
15ನೇ ದಲೈ ಲಾಮಾ ಆಯ್ಕೆ ಮತ್ತು ಪ್ರಕ್ರಿಯೆಗಳು ರಾಜಕೀಯ ಪ್ರಾಮುಖ್ಯತೆಯನ್ನೂ ಪಡೆದಿದ್ದು, ಚೀನಾ, ಅಮೆರಿಕ ಮತ್ತು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿವೆ.
ಈ ಹಿಂದೆ ದಲೈ ಲಾಮಾ ಅವರು ತಮ್ಮ ಉತ್ತರಾಧಿಕಾರಿ ಚೀನಾದ ಹೊರಗೆ ಜನಿಸುತ್ತಾರೆ ಎಂದು ಹೇಳಿದ್ದರು. ಅಲ್ಲದೇ ಚೀನಾವು ಆಯ್ಕೆ ಮಾಡುವ ಉತ್ತರಾಧಿಕಾರಿಯನ್ನು ತಿರಸ್ಕರಿಸುವಂತೆಯೂ ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದರು. ತಮ್ಮ ನಂತರ ಉತ್ತರಾಧಿಕಾರಿ ಇಲ್ಲದಿರಬಹುದು ಎಂದೂ ಹೇಳಿದ್ದರು.
ಚೀನಾದ ಆಳ್ವಿಕೆಯ ವಿರುದ್ಧ ದಂಗೆ ಎದ್ದು 1959ರಲ್ಲಿ ಟಿಬೆಟ್‌ನಿಂದ ಭಾರತಕ್ಕೆ ಪಲಾಯನ ಮಾಡಿದ್ದ ದಲೈ ಲಾಮಾ ಅವರನ್ನು ಚೀನಾ ‘ಪ್ರತ್ಯೇಕತಾವಾದಿ’ ಎಂದು ಕರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.