
ಶಿವಪುರಿ: ಮಹಿಳೆಯೊಬ್ಬರು ತುಪ್ಪದ ವಿಚಾರಕ್ಕೆ ತನ್ನ ಅತ್ತೆಯೊಂದಿಗೆ ಜಗಳವಾಡಿದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಇಮ್ಲೌಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಸೋನಮ್ ಜಾತವ್ ಎಂದು ಗುರುತಿಸಲಾಗಿದೆ.
ಕೌಟುಂಬಿಕ ಕಲಹವಿದ್ದ ಕಾರಣ, ಸೋನಮ್ ಕುಟುಂಬ ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುತ್ತಿತ್ತು. ಅಡುಗೆ ಮಾಡುವಾಗ ತುಪ್ಪದ ವಿಚಾರಕ್ಕೆ ಅತ್ತೆ– ಸೊಸೆ ನಡುವೆ ಗಲಾಟೆ ಜೋರಾಗಿ ನಡೆದಿತ್ತು.
ತನ್ನ ಗಂಡ ಅವರ ತಾಯಿಗೆ ಹೆಚ್ಚು ತುಪ್ಪ ನೀಡಿದ್ದಾರೆ ಎಂಬ ಕಾರಣಕ್ಕೆ ಗಲಾಟೆ ಶುರುವಾಗಿತ್ತು. ಜಗಳದಿಂದ ಮನನೊಂದು ಸೋನಮ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನಮ್ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಬದುಕುಳಿಯಲಿಲ್ಲ. ಆಕೆಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ ಎಂದು ಇಂದರ್ ಪೊಲೀಸ್ ಠಾಣೆ ಉಸ್ತುವಾರಿ ದಿನೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.