ADVERTISEMENT

ಗಣಿಗಾರಿಕೆ ತೋಟ ವಶ: ಕುತ್ತಿಗೆಗೆ ನೇಣಿನ ಕುಣಿಕೆ ಬಿಗಿದು ಪ್ರತಿಭಟನೆ!

ಆಂಧ್ರದ ಉರುವಕೊಂಡ: ಸಾವೊಂದೇ ಆಯ್ಕೆ ಎಂದ ಬುಡಕಟ್ಟು ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 15:48 IST
Last Updated 8 ಏಪ್ರಿಲ್ 2022, 15:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್: ಆಂಧ್ರಪ್ರದೇಶದ ಉರುವಕೊಂಡ ಪಟ್ಟಣದಲ್ಲಿನ ಗೋಡಂಬಿ ತೋಟಗಳನ್ನು ಬಲವಂತವಾಗಿ ವಶಪಡಿಸಿಕೊಂಡು ಸರ್ಕಾರವು ಗಣಿಕಂಪನಿಗೆ ಹಂಚಿಕೆ ಮಾಡುತ್ತಿದೆ ಎಂದು ಆರೋಪಿಸಿರುವ ಇಲ್ಲಿನ ರೈತ ಮಹಿಳೆಯರು ಕುತ್ತಿಗೆಗೆ ನೇಣಿನ ಕುಣಿಕೆ ಸುತ್ತಿಕೊಂಡು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ನಾವು ಗೋಡಂಬಿ ತೋಟಗಳನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದೇವೆ. ಈ ತೋಟಗಳನ್ನು ಸರ್ಕಾರ ಬಲವಂತವಾಗಿ ವಶಪಡಿಸಿಕೊಳ್ಳುತ್ತಿದೆ’ ಎಂದು ಆರೋಪಿಸಿದ ಮಹಿಳೆಯರು ಗೋಡಂಬಿ ಮರಗಳಿಗೆ ಸೀರೆಯಿಂದ ಸಿದ್ಧಪಡಿಸಿದ ನೇಣಿನ ಕುಣಿಕೆಯನ್ನು ಕುತ್ತಿಗೆಗೆ ಸುತ್ತಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದರು.

‘ಇಲ್ಲಿನ ಜಮೀನಿನಲ್ಲಿ ಸಾಗುವಳಿ ಮಾಡಲು ಸರ್ಕಾರವೇ ನಮಗೆ ಅನುಮತಿ ನೀಡಿತ್ತು. ಅನೇಕ ವರ್ಷಗಳಿಂದ ಇಲ್ಲಿನ ಗೋಡಂಬಿ ತೋಟಗಳಲ್ಲಿ ನಾವು ಸಾಗುವಳಿ ಮಾಡುತ್ತಿದ್ದೇವೆ. ಇದೀಗ ಸರ್ಕಾರ ಇಲ್ಲಿನ ತೋಟಗಳನ್ನು ಜೆಸಿಬಿ ಬಳಸಿ ನೆಲಸಮಗೊಳಿಸಿ, ಗ್ರಾನೈಟ್ ಗಣಿಕಂಪನಿಯೊಂದಕ್ಕೆ ನೀಡಲು ಮುಂದಾಗಿದೆ. ಸರ್ಕಾರವು ನಮ್ಮ ಮನವಿ ಆಲಿಸದಿದ್ದಲ್ಲಿ ನಮಗೆ ಸಾವೇ ಗತಿ’ ಎಂದು ಪ್ರತಿಭಟನನಿರತ ಮಹಿಳೆಯರು ಹೇಳಿದರು.

ADVERTISEMENT

‘ನಾವು ಗ್ರಾನೈಟ್ ಗಣಿ ಕಂಪನಿಯಿಂದ ಯಾವುದೇ ಹಣ ಪಡೆದಿಲ್ಲ. ಜಮೀನಿಗೆ ಬದಲಾಗಿ ನಾವು ಹಣ ಪಡೆದಿದ್ದೇವೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ನಮ್ಮ ಬಳಿ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದ ಕಾಗದ ಪತ್ರಗಳೂ ಇಲ್ಲ. ಅಲ್ಲದೇ, ಇಲ್ಲಿನ ತೋಟದ ಮೂಲಕ ರಸ್ತೆ ನಿರ್ಮಿಸಲು ಮುಂದಾಗಿರುವ ಗಣಿ ಕಂಪನಿಗೆ ಅಡ್ಡಿಪಡಿಸಿದ್ದರಿಂದ ನಮ್ಮ ವಿರುದ್ಧವೇ ಸ್ಥಳೀಯ ಕಂದಾಯ ಅಧಿಕಾರಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ತಕ್ಷಣವೇ ತನಿಖೆ ನಡೆಸಬೇಕು’ ಎಂದೂ ಮಹಿಳೆಯರು ಆಗ್ರಹಿಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕೃಷಿ ಜಮೀನನ್ನು ಗಣಿಗಾರಿಕೆಗೆ ನೀಡುವುದನ್ನು ವಿರೋಧಿಸಿ ಇಲ್ಲಿನ 11 ಬುಡಕಟ್ಟು ಕುಟುಂಬಗಳು ಸೋಮವಾರ ವಿಶಾಖಪಟ್ಟಣದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.