ADVERTISEMENT

ಅಹಮದಾಬಾದ್‌ನಿಂದ ಲಂಡನ್‌ ತಲು‍ಪುವ ನಿರ್ಣಯವೇ ಮುಳುವಾಯಿತು

ಪಿಟಿಐ
Published 14 ಜೂನ್ 2025, 15:51 IST
Last Updated 14 ಜೂನ್ 2025, 15:51 IST
.
.   

ಮುಂಬೈ: ಅನಾರೋಗ್ಯಪೀಡಿತ ತಾಯಿಯನ್ನು ನೋಡಲು ಕುಟುಂಬ ಸಮೇತರಾಗಿ ಮುಂಬೈಗೆ ಬಂದಿದ್ದ ಜಾವೇದ್‌ ಅಲಿ ಸೈಯದ್‌ ಅವರು, ವಾಪಸ್‌ ಲಂಡನ್‌ಗೆ ತೆರಳಲು ಮುಂಬೈನಿಂದ ವಿಮಾನವು ಲಭ್ಯವಾಗದ ಕಾರಣ ಅಹಮದಾಬಾದ್‌ನಿಂದ ಪ್ರಯಾಣಿಸುವ ನಿರ್ಧಾರ ಕೈಗೊಂಡಿದ್ದರು. ದುರದೃಷ್ಟವಶಾತ್ ಈ ನಿರ್ಧಾರವೇ ಇಡೀ ಕುಟುಂಬವನ್ನು ಸರ್ವನಾಶ ಮಾಡಿತು.

ಮುಂಬೈನ ಮಾಲಾಡ್‌ ಪೂರ್ವದ ಜಾವೇದ್ ಅಲಿ ಅವರು ಬ್ರಿಟನ್‌ಗೆ ತೆರಳಿ ಅಲ್ಲಿಯೇ ನೆಲಸಿದ್ದರು. ಅವರು ಪತ್ನಿ ಮರಿಯಂ ಮತ್ತು ಇಬ್ಬರು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದರು. ಒಂದು ವಾರ ಮುಂಬೈನಲ್ಲಿದ್ದ ಅವರು ನತದೃಷ್ಟ ಏರ್‌ಇಂಡಿಯಾ ವಿಮಾನದ ಮೂಲಕ ವಾಪಸ್‌ ಲಂಡನ್‌ಗೆ ಹೊರಟಿದ್ದರು.

‘ಜಾವೇದ್ 11 ವರ್ಷಗಳ ಹಿಂದೆ ಬ್ರಿಟನ್‌ಗೆ ತೆರಳಿ, ಅಲ್ಲಿಯ ಪ್ರಜೆಯಾದ ಮರಿಯಂ ಅವರನ್ನು ವಿವಾಹವಾಗಿದ್ದರು. ಲಂಡನ್‌ನಲ್ಲಿ ಸುಖವಾಗಿ ಸಂಸಾರ ಸಾಗಿಸುತ್ತಿದ್ದರು. ತಾಯಿಯನ್ನು ನೋಡಲು ಮತ್ತು ಕುಟುಂಬದೊಂದಿಗೆ ಈದ್‌ ಆಚರಿಸಲು ತವರಿಗೆ ಬಂದಿದ್ದರು’ ಎಂದು ಜಾವೇದ್‌ ಅವರ ಸಹೋದರ ಇಮ್ತಿಯಾಜ್‌ ಅಲಿ ಅವರು ತಿಳಿಸಿದರು.

ADVERTISEMENT

‘ಸುದೀರ್ಘ ಸಮಯದ ನಂತರ ಜಾವೇದ್‌ ಅವರ ಕುಟುಂಬವು ಭಾರತಕ್ಕೆ ಬಂದಿತ್ತು. ಆದರೆ ಇದು ಅವರ ಕೊನೆಯ ಪಯಣವಾಗಿತ್ತು ಎಂಬುದು ನೋವಿನ ಸಂಗತಿ. ಅಹಮದಾಬಾದ್‌ ಮೂಲಕ ಲಂಡನ್‌ ತಲುಪುವ ನಿರ್ಧಾರ ಕೈಗೊಂಡಿದ್ದಕ್ಕೆ ವಿಷಾದಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.