ADVERTISEMENT

1,000ಕ್ಕೂ ಹೆಚ್ಚು ಪ್ರಕರಣ ಸಿಬಿಐ ತನಿಖೆಗೆ ಬಾಕಿ: ಸಂಸದೀಯ ಸ್ಥಾಯಿ ಸಮಿತಿ

ಪಿಟಿಐ
Published 24 ಮಾರ್ಚ್ 2022, 19:32 IST
Last Updated 24 ಮಾರ್ಚ್ 2022, 19:32 IST
ಕೇಂದ್ರೀಯ ತನಿಖಾ ದಳದಲ್ಲಿ (ಸಿಬಿಐ)
ಕೇಂದ್ರೀಯ ತನಿಖಾ ದಳದಲ್ಲಿ (ಸಿಬಿಐ)   

ನವದೆಹಲಿ: ಕೇಂದ್ರೀಯ ತನಿಖಾ ದಳದಲ್ಲಿ (ಸಿಬಿಐ) 1,000 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಅವುಗಳಲ್ಲಿ 66 ಪ್ರಕರಣಗಳು ಐದು ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ತನಿಖೆಯಾಗದೇ ಬಾಕಿ ಉಳಿದಿವೆ ಎಂದು ಸಂಸದೀಯ ಸ್ಥಾಯಿ ಸಮಿತಿ ಗುರುವಾರ ಹೇಳಿದೆ.

ತನಿಖೆ ವಿಳಂಬ ಮಾಡಿದರೆ ಸಿಗುವ ನ್ಯಾಯವು ನ್ಯಾಯವಲ್ಲ ಎಂದು ಹೇಳಿರುವ ಸಮಿತಿ, ಸೂಕ್ತ ತನಿಖೆ ನಡೆಸದೇ ಪ್ರಕರಣಗಳನ್ನು ಅಂತ್ಯಗೊಳಿಸಲು ದಶಕಗಳವರೆಗೆ ಕಾಲಹರಣ ಮಾಡುವುದು ಸರಿಯಲ್ಲ. ಆದ್ದರಿಂದ ತನಿಖೆಯನ್ನು ತ್ವರಿತವಾಗಿ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.

ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಮಾರ್ಗಸೂಚಿ ಸಿದ್ಧಪಡಿಸುವಂತೆ ಸಿಬಿಐಗೆ ಸಮಿತಿ ಸೂಚಿಸಿದೆ.

ADVERTISEMENT

ಈ ವರ್ಷದ ಜನವರಿ 31 ರವರೆಗೆ 1,025 ಪ್ರಕರಣಗಳು ತನಿಖೆಗೆ ಬಾಕಿ ಉಳಿದಿವೆ, ಅವುಗಳಲ್ಲಿ 66 ಪ್ರಕರಣಗಳು ಐದು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ ಎಂದು ಸಿಬಿಐ ಲಿಖಿತವಾಗಿ ತಿಳಿಸಿದೆ ಎಂದು ಸಮಿತಿಯು ಸಂಸತ್ತಿನಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ತಿಳಿಸಿದೆ.

ತನಿಖಾ ಸಂಸ್ಥೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು. ಇದರಿಂದ ಬಾಕಿ ಪ್ರಕರಣಗಳ ಸಂಖ್ಯೆ ಸಹ ಕಡಿಮೆಯಾಗಲಿದೆ. ಆದ್ದರಿಂದ, ಸಿಬಿಐನ ಕೇಡರ್ ಪುನರ್‌ರಚನೆ ಮಾಡಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

2015 ರಿಂದ 2021ರ ಅವಧಿಯಲ್ಲಿ 34 ಸಿಬಿಐ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ 32 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 20 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದೂ ಸಮಿತಿಯ ವರದಿ ತಿಳಿಸಿದೆ.

‘ಕೇಂದ್ರ ಸರ್ಕಾರ’ವಲ್ಲ, ಭಾರತ ಒಕ್ಕೂಟ: ಸಂಸದೀಯ ಸ್ಥಾಯಿ ಸಮಿತಿ
ನವದೆಹಲಿ:
ಭಾರತ ಒಕ್ಕೂಟವೋ ಅಥವಾ ಕೇಂದ್ರ ಸರ್ಕಾರವೋ? ವಿರೋಧಪಕ್ಷಗಳ ನಾಯಕರಾದ ರಾಹುಲ್‌ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಇಂಥದೊಂದು ಪ್ರಶ್ನೆ ಎತ್ತಿದ್ದರು.

ಈ ಮುಖಂಡರ ಮಾತಿಗೆ ಬೆಂಬಲ ಎಂಬಂತೆ ಬಿಜೆಪಿ ಸಂಸದ ಸುಶೀಲ್‌ ಕುಮಾರ್ ಮೋದಿ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯು ‘ಭಾರತ ಒಕ್ಕೂಟ’ ಎಂಬ ವಾದಕ್ಕೇ ಒತ್ತು ನೀಡಿದೆ.

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ವಿಷಯ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಗುರುವಾರ ಮಂಡಿಸಿದ ಸಚಿವಾಲಯದ ಅನುದಾನ ಕುರಿತ ವರದಿಯಲ್ಲಿ ಈ ವಾದವನ್ನು ಉಲ್ಲೇಖಿಸಿದೆ.

ಕೇಂದ್ರ ಸರ್ಕಾರ ಬಳಕೆಗೆ ಪರ್ಯಾಯವಾಗಿ ಭಾರತ ಒಕ್ಕೂಟ ಎಂದೇ ಬಳಸಬೇಕು. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಅಧಿಕಾರಿಗಳನ್ನು ಭಾರತ ಒಕ್ಕೂಟದ ಅಧಿಕಾರಿಗಳು ಎಂದೇ ಉಲ್ಲೇಖಿಸಬೇಕು ಎಂದು ಹೇಳಿದೆ.

ಇದಕ್ಕೆ ಪ್ರತಿಯಾಗಿ ಸಚಿವಾಲಯವು ಸಮಿತಿಗೆ ‘ಸ್ಪಷ್ಟವಾಗಿ’, ಇದು ನಿಮ್ಮ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ಪ್ರತಿಕ್ರಿಯಿಸಿದೆ.

ಈ ಪ್ರತಿಕ್ರಿಯೆಯನ್ನು ಲಘುವಾಗಿ ಪರಿಗಣಿಸದ ಸಮಿತಿಯು ತನ್ನ ಮತ್ತು ಸಚಿವಾಲಯಾದ ಮನಸ್ಸಾಕ್ಷಿಗೆ ಅನುಗುಣವಾಗಿ, ಸಮಿತಿಯ ಶಿಫಾರಸುಗಳು ‘ಪರಿಮಿತಿಯಲ್ಲಿಯೇ’ ಅಂದರೆ ಸಂವಿಧಾನ ಮತ್ತು ಸಮಿತಿಯ ನಿಯಮಗಳ ವ್ಯಾಪ್ತಿಯಲ್ಲಿಯೇ ಇವೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.