ಅರವಿಂದ ಕೇಜ್ರಿವಾಲ್
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಮರುಆಯ್ಕೆ ಮಾಡುವಂತೆ ಕೋರಿ ಆಮ್ ಆದ್ಮಿ ಪಕ್ಷ (ಎಎಪಿ) ಸೋಮವಾರ ಮತ್ತೊಂದು ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದೆ.
ಲೊಹರಿ ಹಬ್ಬದ ಪ್ರಯುಕ್ತ ಎಎಪಿ ‘ಮತ್ತೊಮ್ಮೆ ಕೇಜ್ರಿವಾಲ್‌ರನ್ನು ಆರಿಸಿ’ ಎನ್ನುವ ಹೆಸರಿನ ಗೀತೆಯನ್ನು ಬಿಡುಗಡೆ ಮಾಡಿದೆ.
1.33 ನಿಮಿಷದ ಪಂಜಾಬಿ ಹಾಡು ಇದಾಗಿದ್ದು, ‘ಸಾರ್ವಜನಿಕ ಕಲ್ಯಾಣ ಯೋಜನೆಯನ್ನು ಮುಂದುವರಿಸಲು ಮತ್ತು ಅವರು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲು ಕೇಜ್ರಿವಾಲ್ ಅವರನ್ನು ಮತ್ತೆ ಆಯ್ಕೆ ಮಾಡಿ ಎನ್ನುವ ಸಾಲುಗಳು ಗೀತೆಯಲ್ಲಿವೆ’ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಗೀತೆಯನ್ನು ಬಿಡುಗಡೆ ಮಾಡಲಾಗಿದ್ದು, ಎಎಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಗೀತೆಯುದ್ದಕ್ಕೂ ದೆಹಲಿಯಲ್ಲಿ ಕೇಜ್ರಿವಾಲ್ ಅವರ ಸಾಧನೆ ಮತ್ತು ನಗರದ ಅಭಿವೃದ್ಧಿ ಕಾರ್ಯಗಳು ಹಾಗೂ ಅವರ ನೇತೃತ್ವದಲ್ಲಿ ನಡೆದ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಪ್ರಮುಖವಾಗಿ ಉಚಿತ ವಿದ್ಯುತ್, ನೀರು ಮತ್ತು ಹಿರಿಯ ನಾಗರಿಕರಿಗೆಂದು ಜಾರಿಯಾದ ಯೋಜನೆಗಳ ಬಗ್ಗೆ ಉಲ್ಲೇಖಿಸಲಾಗಿದೆ.
ಅಲ್ಲದೆ, ಎಎಪಿ ಪ್ರಣಾಳಿಕೆಯಲ್ಲಿ ನೀಡಿರುವ ಹೊಸ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಗೀತೆಯಲ್ಲಿ ಹೇಳಲಾಗಿದೆ. ಮಹಿಳೆಯರಿಗೆ ಪ್ರತಿ ತಿಂಗಳು ₹2,100 ನೀಡುವ ಮಹಿಳಾ ಸಮ್ಮಾನ್ ಯೋಜನೆ ಮತ್ತು 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರ ವೈದ್ಯಕೀಯ ವೆಚ್ಚವನ್ನು ಭರಿಸುವ ಸಂಜೀವಿನಿ ಯೋಜನೆ ಬಗ್ಗೆ ತಿಳಿಸಲಾಗಿದೆ.
ಈ ಹಿಂದೆ ‘ಫಿರ್ ಲಾಯೆಂಗೆ ಕೇಜ್ರಿವಾಲ್’ ಎನ್ನುವ ಪ್ರಚಾರ ಗೀತೆಯನ್ನು ಎಎಪಿ ಬಿಡುಗಡೆ ಮಾಡಿತ್ತು.
70 ಕ್ಷೇತ್ರಗಳ ದೆಹಲಿ ವಿಧಾನಸಭೆಗೆ ಫೆ. 5 ರಂದು ಮತದಾನ ನಡೆಯಲಿದ್ದು, ಫೆ.8 ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.