ಬಿಜೆಪಿ
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ದಿನದಿಂದ ದಿನಕ್ಕೆ ಚುನಾವಣಾ ಕಾವು ರಂಗೇರುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಚುನಾವಣೆ ಪ್ರಯುಕ್ತ ಬಿಜೆಪಿ ಇಂದು (ಭಾನುವಾರ) ‘ದಿಲ್ ವಾಲೋ ಕಿ ದೆಹಲಿ ಕೋ ಅಬ್ ಬಿಜೆಪಿ ಸರ್ಕಾರ್ ಚಾಹಿಯೇ’ (ಹೃದಯವಂತ ದೆಹಲಿ ಜನರಿಗೆ ಬಿಜೆಪಿ ಸರ್ಕಾರ ಬೇಕು) ಎಂಬ ಹೊಸ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದೆ.
ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ದೆಹಲಿ ವಿಧಾನಸಭೆ ಚುನಾವಣೆ ಪ್ರಯುಕ್ತ ಪಕ್ಷದ ನಾಲ್ಕನೇ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ.
ಹಿರಿಯ ಬಿಜೆಪಿ ನಾಯಕ ನೀಲ್ ಕಾಂತ್ ಬಕ್ಷಿ ಅವರ ಸಂಗೀತ ನಿರ್ದೇಶನವಿರುವ ‘ದಿಲ್ ವಾಲೋ ಕಿ ದಿಲ್ಲಿ ಕೋ ಅಬ್ ಬಿಜೆಪಿ ಸರ್ಕಾರ್ ಚಾಹಿಯೇ’ ಹಾಡನ್ನು ಮಾಜಿ ಸಂಸದ ದಿನೇಶ್ ಲಾಲ್ ಯಾದವ್ ಹಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಿವಾರಿ, ‘ದೆಹಲಿಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮತ್ತೊಂದು ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದ್ದೇವೆ. ಜತೆಗೆ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದೆ’ ಎಂದು ತಿಳಿಸಿದ್ದಾರೆ.
‘ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಯಾವ ಭರವಸೆಗಳನ್ನು ಉಲ್ಲೇಖಿಸಲಾಗಿದೆಯೋ ಅದನ್ನು ಈಗಾಗಲೇ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಜಾರಿಗೊಳಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ನಿನ್ನೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2025-26 ಸಾಲಿನ ಬಜೆಟ್‌ನಲ್ಲಿ ಮಧ್ಯಮ ವರ್ಗದ ಬಹುನಿರೀಕ್ಷಿತ ಆದಾಯ ತೆರಿಗೆ ರಿಯಾಯಿತಿಗೆ ಸ್ಪಂದನೆ ಸಿಕ್ಕಿದ್ದು, ₹12 ಲಕ್ಷದ ವರೆಗಿನ ಆದಾಯ ತೆರಿಗೆಗೆ (ಕ್ಯಾಪಿಟಲ್ ಗೇನ್ ಹೊರತಾಗಿ) ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಬಿಜೆಪಿ ಜನರ ಪರ ಇದೆ ಎಂಬುದಕ್ಕೆ ಇದುವೇ ಸಾಕ್ಷಿ’ ಎಂದು ತಿವಾರಿ ತಿಳಿಸಿದ್ದಾರೆ.
70 ಸದಸ್ಯ ಬಲದ ದೆಹಲಿಯಲ್ಲಿ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.