ಅರವಿಂದ ಕೇಜ್ರಿವಾಲ್ ಮತ್ತು ಪರ್ವೇಶ್ ವರ್ಮಾ
–ಪಿಟಿಐ ಚಿತ್ರ
ನವದೆಹಲಿ: ತಮ್ಮ ವಿರುದ್ಧ ಸುಳ್ಳು ಹಾಗೂ ಮಾನಹಾನಿಕಾರಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ₹100 ಕೋಟಿ ಪಾವತಿಸುವಂತೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಕೇಜ್ರಿವಾಲ್ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ತಾವು ಗೆದ್ದರೆ, ಬಂದಂತಹ ಹಣವನ್ನು ನವದೆಹಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತೇನೆ’ ಎಂದು ಹೇಳಿದ್ದಾರೆ.
ಪರ್ವೇಶ್ ವರ್ಮಾ ಅವರು ‘ಪಂಜಾಬಿಗಳಿಂದ ದೇಶಕ್ಕೆ ಬೆದರಿಕೆ ಇದೆ’ ಎಂದು ಹೇಳಿರುವುದಾಗಿ ಈಚೆಗೆ ಕೇಜ್ರಿವಾಲ್ ಆರೋಪಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ವರ್ಮಾ, ‘ನಾನು ಮತ್ತು ನನ್ನ ಕುಟುಂಬದವರು ಸಿಖ್ ಸಮುದಾಯಕ್ಕಾಗಿ ಏನು ಮಾಡಿದ್ದೇವೆ ಎಂಬುದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ’ ಎಂದಿದ್ದಾರೆ.
‘ಇತ್ತೀಚಿನ ದಿನಗಳಲ್ಲಿ ಎಎಪಿ ಪರ ಪ್ರಚಾರ ನಡೆಸಲು ಪಂಜಾಬ್ ಮುಖ್ಯಮಂತ್ರಿ ಮಾನ್ ಸೇರಿದಂತೆ ಸಚಿವರು, ಶಾಸಕರು ಸಾವಿರಾರು ಕಾರುಗಳನ್ನು ಬಳಸಿಕೊಂಡು ದೆಹಲಿ ಪ್ರವೇಶಿಸುತ್ತಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವದ ಪರೇಡ್‌ಗೂ ಮುಂಚಿತವಾಗಿ ಪಂಜಾಬ್‌ನ ಕಾರುಗಳು ದೆಹಲಿಯಲ್ಲಿ ಭದ್ರತಾ ಬೆದರಿಕೆಯನ್ನುಂಟು ಮಾಡುತ್ತಿವೆ’ ಎಂದು ವರ್ಮಾ ಆರೋಪಿಸಿದ್ದಾರೆ.
‘ಎಎಪಿ ನಾಯಕರು ಪ್ರಚಾರ ನಡೆಸುವುದರಿಂದ ನನಗೆ ಯಾವುದೇ ತೊಂದರೆ ಇಲ್ಲ. ಆದರೆ, ಅವರು ಚೀನಾದ ಕಂಪನಿಗಳ ಸಿಸಿಟಿವಿ ಕ್ಯಾಮೆರಾಗಳು, ಮದ್ಯ ಮತ್ತು ಹಣವನ್ನು ವಿತರಿಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಈ ಕುರಿತು ಪೊಲೀಸರು ಮತ್ತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ’ ಎಂದು ವರ್ಮಾ ಹೇಳಿದ್ದಾರೆ.
‘ರಾಮ ಮತ್ತು ಹನುಮಂತನ ಕುರಿತ ಹೇಳಿಕೆಗಳ ಮೂಲಕ ಕೇಜ್ರಿವಾಲ್ ಅವರು ಹಿಂದೂಗಳ ಭಾವನೆಗಳನ್ನು ಅವಮಾನಿಸಿದ್ದಾರೆ. ಜತೆಗೆ, ಸೋಲಿನ ಹತಾಶೆಯಿಂದ ನನ್ನ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ’ ಎಂದು ವರ್ಮಾ ಟೀಕಿಸಿದ್ದಾರೆ.
ಈ ಬಾರಿ ಅರವಿಂದ ಕೇಜ್ರಿವಾಲ್ ಅವರು ಸ್ಪರ್ಧಿಸಲಿರುವ ನವದೆಹಲಿ ಕ್ಷೇತ್ರದಲ್ಲಿ ಅತಿ ಹೆಚ್ಚು (23) ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಪರ್ವೇಶ್ ವರ್ಮಾ ಹಾಗೂ ಕಾಂಗ್ರೆಸ್‌ನಿಂದ ಸಂದೀಪ್ ದೀಕ್ಷಿತ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
70 ಸದಸ್ಯ ಬಲದ ದೆಹಲಿಯಲ್ಲಿ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.