ADVERTISEMENT

AAP–BJP ಒಳ ಒಪ್ಪಂದದ ಹೋರಾಟದಲ್ಲಿ ಫುಟ್‌ಬಾಲ್‌ನಂತಾದ ದೆಹಲಿ: ಕಾಂಗ್ರೆಸ್

ಪಿಟಿಐ
Published 18 ಜನವರಿ 2025, 5:10 IST
Last Updated 18 ಜನವರಿ 2025, 5:10 IST
ಬಿಜೆಪಿ, ಕಾಂಗ್ರೆಸ್, ಎಎಪಿ
ಬಿಜೆಪಿ, ಕಾಂಗ್ರೆಸ್, ಎಎಪಿ   

ನವದೆಹಲಿ: ಎಎಪಿ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದು, ಪರಸ್ಪರ ಹೋರಾಟದ ನಾಟಕವಾಡುತ್ತಿವೆ. ಹೀಗಾಗಿ, ದೆಹಲಿಯ ಸ್ಥಿತಿ ಫುಟ್‌ಬಾಲ್‌ನಂತಾಗಿದೆ ಎಂದು ಕಾಂಗ್ರೆಸ್‌ ಶುಕ್ರವಾರ ಆರೋಪಿಸಿದೆ.

ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕ ಪವನ್‌ ಖೇರಾ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 2013–14ರಲ್ಲಿ ಸರ್ಕಾರಗಳು ಬದಲಾದ ನಂತರ ದೆಹಲಿಯು ಸಾಕಷ್ಟು ಹಗರಣಗಳಿಗೆ ಸಾಕ್ಷಿಯಾಗಿದೆ ಎಂದು ದೂರಿದ್ದಾರೆ.

'2013-14ರಿಂದ ದೆಹಲಿಯಲ್ಲಿ ಏನೆಲ್ಲಾ ಆಗುತ್ತಿದೆಯೋ ಅದನ್ನು ಡಬಲ್‌ ವಂಚನೆ ಎಂದು ಕರೆಯುತ್ತೇನೆ. ಮೊದಲನೇಯದ್ದನ್ನು ದೆಹಲಿ ಸರ್ಕಾರ ಆರಂಭಿಸಿದರೆ, ಎರಡನೇಯದ್ದನ್ನು ಕೇಂದ್ರ ಸರ್ಕಾರ ಶುರು ಮಾಡಿತು' ಎಂದಿದ್ದಾರೆ.

ADVERTISEMENT

'ಈ ಎರಡು (ಎಎಪಿ, ಬಿಜೆಪಿ) ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು, ನಾಟಕದ ಹೋರಾಟ ನಡೆಸುತ್ತಿರುವುದರಿಂದ ದೆಹಲಿಯ ಸ್ಥಿತಿ ಫುಟ್‌ಬಾಲ್‌ನಂತಾಗಿದೆ. ಆದರೆ, ನಗರದ ಜನ ಅದನ್ನು ಸಹಿಸುವುದಿಲ್ಲ. ಈ ಚುನಾವಣೆಯು ಇಡೀ ರಾಷ್ಟ್ರದ ಭವಿಷ್ಯವನ್ನು ಬರೆಯಲಿದೆ. ಇಡೀ ದೇಶಕ್ಕೆ ದಿಕ್ಕು ತೋರಲಿದೆ. ಜನರು ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರೆ' ಎಂದು ಹೇಳಿದ್ದಾರೆ.

ಈ ಬಾರಿಯ ಚುನಾವಣೆ ಬಳಿಕ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಸಚಿವ ಸಂಪುಟದ ಮೊದಲ ಸಭೆಯಲ್ಲೇ ಎಲ್ಲ ಭರವಸೆಗಳನ್ನು ಈಡೇರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಅಧಿಕಾರದಲ್ಲಿರುವ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ ಹಾಗೂ ಜಾರ್ಖಂಡ್‌ನಲ್ಲಿ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದೆ ಎಂದು ಪ್ರತಿಪಾದಿಸಿರುವ ಅವರು, ತಮ್ಮ ಪಕ್ಷವು ನೀಡಿದ ಆಶ್ವಾಸನೆಗಳನ್ನು ಈಡೇರಿಸುತ್ತದೆ ಎಂಬುದನ್ನು ಜನರು ನಂಬುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ದೆಹಲಿ ಜನರಿಗೆ ಉಚಿತ ಪಡಿತರ, 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್, ₹ 500ಕ್ಕೆ ಎಲ್‌ಪಿಜಿ ಸಿಲಿಂಡರ್‌, ಮಹಿಳೆಯರಿಗೆ ಮಾಸಿಕ ₹ 2,500, ₹ 25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ, ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ₹8,500 ನೆರವು ಸೇರಿದಂತೆ ಹಲವು ಭರವನೆಗಳನ್ನು ನೀಡಿದೆ.

70 ಸದಸ್ಯರ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಮೂರು ದಿನಗಳ ಬಳಿಕ (ಫೆ. 8ರಂದು) ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.