ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಪಿಟಿಐ ಚಿತ್ರಗಳು
ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿಯು ಈ ಹಿಂದೆ ಮಾಡಿರುವ ಯಾವುದೇ ತಪ್ಪನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಬಿಜೆಪಿ ನಾಯಕರು ಬಹಿರಂಗವಾಗಿ ಹಣ ಹಂಚುತ್ತಿದ್ದಾರೆ. ಮತಗಳ ಖರೀದಿಗೆ ಆರ್‌ಎಸ್‌ಎಸ್‌ನ ಬೆಂಬಲ ಇದೆಯೇ? ಹಾಗೂ ದಲಿತರು, ಪೂರ್ವಾಂಚಲಿಗಳ ಹೆಸರುಗಳನ್ನು ಮತಪಟ್ಟಿಯಿಂದ ಅಳಿಸುತ್ತಿರುವ ಬಿಜೆಪಿಗೆ ಬೆಂಬಲ ನೀಡುತ್ತದೆಯೇ ಮತ್ತು ಇದು ಪ್ರಜಾಪ್ರಭುತ್ವದಲ್ಲಿ ಸರಿಯಾದ ಕ್ರಮವೆಂದು ಭಾವಿಸುತ್ತದೆಯೇ? ಎಂದು ಕೇಳಿದ್ದಾರೆ.
ಬಿಜೆಪಿಯು ದೇಶದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ನಿಮಗೆ ಅನಿಸುತ್ತಿಲ್ಲವೇ ಎಂದೂ ಪ್ರಶ್ನಿಸಿದ್ದಾರೆ.
ದೆಹಲಿ ವಿಧಾನಸಭೆಗೆ ಫೆಬ್ರುವರಿಯಲ್ಲಿ ಚುನಾವಣೆ ನಡೆಯಲಿದೆ. ಎಎಪಿ ಹಾಗೂ ಬಿಜೆಪಿ ನಾಯಕರು ಆರೋಪ–ಪ್ರತ್ಯಾರೋಪ ನಡೆಸುತ್ತಿರುವ ಹೊತ್ತಿನಲ್ಲೇ ಕೇಜ್ರಿವಾಲ್ ಪತ್ರ ಬರೆದಿದ್ದಾರೆ.
2024ರ ಸೆಪ್ಟೆಂಬರ್‌ನಲ್ಲಿಯೂ ಭಾಗವತ್‌ಗೆ ಪತ್ರ ಬರೆದಿದ್ದ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು.
ಮಗ ಈಗ ತನ್ನ ತಾಯಿಗೇ ಅಹಂ ತೋರುವಷ್ಟು ದೊಡ್ಡವನಾ?, ಆರ್‌ಎಸ್‌ಎಸ್ (ತಾಯಿ) ಮಾತಿಗೆ ಮೋದಿ (ಮಗ) ಅವರು ಕಿಮ್ಮತ್ತು ನೀಡುತ್ತಿಲ್ಲವೇ? ಎಲ್.ಕೆ.ಅಡ್ವಾಣಿ ಅವರಂತೆ ಬಿಜೆಪಿಯ ನಿವೃತ್ತಿ ವಯಸ್ಸಿನ ನಿಯಮವು ಮೋದಿಗೂ ಅನ್ವಯಿಸುತ್ತದೆಯೇ? ಕೆಲವು ರಾಜಕಾರಣಿಗಳನ್ನು ಭ್ರಷ್ಟರು ಎಂದು ಆರೋಪಿಸಿ ನಂತರ, ಅವರನ್ನೇ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಬಿಜೆಪಿಯ ರಾಜಕೀಯವನ್ನು ನೀವು ಒಪ್ಪುತ್ತೀರಾ? 'ಆರ್‌ಎಸ್‌ಎಸ್ ಬಿಜೆಪಿಗೆ ಅಗತ್ಯವಿಲ್ಲ' ಎಂದು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಹೇಳಿದಾಗ ನಿಮಗೆ ಏನನ್ನಿಸಿತು? ಆ ಪಕ್ಷದ ಪ್ರಸ್ತುತ ರಾಜಕೀಯ ನಡೆ ನಿಮಗೆ ತೃಪ್ತಿ ತಂದಿದೆಯೇ? ಎಂದು ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.