ಎಎಪಿ ಶಾಸಕ ಅಮಾನತುಲ್ಲಾ ಖಾನ್
ಪಿಟಿಐ ಚಿತ್ರ
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದರೂ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಸಾಮಗ್ರಿಗಳನ್ನು ಹಂಚುತ್ತಿದ್ದ ಆರೋಪದಡಿ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತುಲ್ಲಾ ಖಾನ್ ಅವರ ವಿರುದ್ಧ ಪೊಲೀಸರು ಇಂದು (ಬುಧವಾರ) ಎಫ್‌ಐಆರ್ ದಾಖಲಿಸಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಖಾನ್ ಅವರು ಓಖ್ಲಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಖಾನ್ ಅವರು, ಚುನಾವಣೆಗೆ ಸಂಬಂಧಿಸಿದ ಸ್ಟಿಕ್ಕರ್ ಹಾಗೂ ಇತರ ವಸ್ತುಗಳನ್ನು ಬಟ್ಲಾ ಹೌಸ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಹಂಚುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಜಾಮಿಯಾ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
'ವಿಡಿಯೊ ಹಾಗೂ ಪ್ರಾಥಮಿಕ ತನಿಖೆ ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ. ವಿಚಾರಣೆ ಹಾಗೂ ಮತ್ತಷ್ಟು ತನಿಖೆ ಪ್ರಗತಿಯಲ್ಲಿದೆ' ಎಂದು ಹೇಳಿವೆ.
ಚುನಾವಣೆಗೆ ಬಹಿರಂಗ ಪ್ರಚಾರವು ಸೋಮವಾರ ಸಂಜೆಗೆ ಕೊನೆಗೊಂಡಿದೆ. ಫಲಿತಾಂಶ ಫೆಬ್ರುವರಿ 8ರಂದು ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.