ADVERTISEMENT

Delhi Assembly Elections: ಭಾರಿ ಬಹುಮತ ಸಾಧಿಸಿದ ಬಿಜೆಪಿ ಕೈ ಹಿಡಿದ ಅಂಶಗಳೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2025, 13:47 IST
Last Updated 8 ಫೆಬ್ರುವರಿ 2025, 13:47 IST
<div class="paragraphs"><p>ಪ್ರಧಾನಿ ನರೇಂದ್ರ ಮೊದಿ ಚಿತ್ರ ಹಿಡಿದಿರುವ ಬಿಜೆಪಿ ನಾಯಕ ಪರ್ವೇಶ್‌ ವರ್ಮಾ ಹಾಗೂ ಅರವಿಂದ ಕೇಜ್ರಿವಾಲ್</p></div>

ಪ್ರಧಾನಿ ನರೇಂದ್ರ ಮೊದಿ ಚಿತ್ರ ಹಿಡಿದಿರುವ ಬಿಜೆಪಿ ನಾಯಕ ಪರ್ವೇಶ್‌ ವರ್ಮಾ ಹಾಗೂ ಅರವಿಂದ ಕೇಜ್ರಿವಾಲ್

   

ಪಿಟಿಐ ಚಿತ್ರಗಳು

ನವದೆಹಲಿ: ಸತತ ಮೂರನೇ ಬಾರಿಗೆ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರುವ ಆಮ್‌ ಆದ್ಮಿ ಪಕ್ಷದ (ಎಎಪಿ) ಕನಸು ಕಮರಿದೆ. ಕಳೆದೆರಡು ಚುನಾವಣೆಗಳಲ್ಲಿ ಒಮ್ಮೆಯೂ ಹತ್ತರ ಗಡಿ ದಾಟದ ಬಿಜೆಪಿ, ಈ ಸಲ ಬರೋಬ್ಬರಿ 48 ಸ್ಥಾನಗಳನ್ನು ಗೆದ್ದು ಭರ್ಜರಿ ಸರ್ಕಾರ ರಚನೆಗೆ ಸಿದ್ಧತೆ ಆರಂಭಿಸಿದೆ.

ADVERTISEMENT

ದೆಹಲಿ ಸರ್ಕಾರ ಸದ್ಯ ಹಿಂಪಡೆದಿರುವ ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎಂಬ ಆರೋಪವು, ಈ ಚುನಾವಣೆಯಲ್ಲಿ ಎಎಪಿ ಪಾಲಿಗೆ ದೊಡ್ಡ ಪೆಟ್ಟು ನೀಡಿತು. ಆಡಳಿತಾವಧಿಯುದ್ಧಕ್ಕೂ ಸರ್ಕಾರ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ನಡುವಣ ತಿಕ್ಕಾಟವೂ ಆಡಳಿತ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡಿತು.

ಘಟಾನುಘಟಿ ನಾಯಕರಾದ ಅರವಿಂದ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ, ಸತ್ಯೇಂದ್ರ ಜೈನ್‌ ಅವರು ಸೋಲು ಕಂಡಿರುವುದು, ಭಷ್ಟ್ರಾಚಾರ ವಿರೋಧಿ ಮಂತ್ರದೊಂದಿಗೆ ಅಧಿಕಾರಕ್ಕೇರಿದ್ದ ಎಎಪಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ.

ಎಎಪಿಯು, ಚುನಾವಣಾ ಪೂರ್ವದಲ್ಲಿ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿತ್ತು. ಆದರೆ, ಆ ಪಕ್ಷದ ಪ್ರಮುಖ ನಾಯಕರ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ಸಾಗಿದ್ದು ಬಿಜೆಪಿಗೆ ವರವಾಯಿತು. ಅಷ್ಟು ಮಾತ್ರವಲ್ಲ, ಈ ಚುನಾವಣೆಯಲ್ಲಿ ಕೇಸರಿ ಪಕ್ಷದ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು ಇಲ್ಲಿವೆ.

  • ಸಿಎಂ ವಿರುದ್ಧ ಭ್ರಷ್ಟಾಚಾರ ಆರೋಪ ಹಾಗೂ ಅಬಕಾರಿ 'ಹಗರಣ'

ದೆಹಲಿ ಮುಖ್ಯಮಂತ್ರಿಯವರ ಅಧಿಕೃತ ನಿವಾಸ 'ಶೀಷ್‌ ಮಹಲ್‌'ನ ನವೀಕರಣ ಕಾರ್ಯದಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದ ಬಿಜೆಪಿ, ಆಗಿನ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ವಿರುದ್ಧ ವಾಗ್ದಾಳಿ ನಡೆಸಿತ್ತು.

ಕೇಜ್ರಿವಾಲ್‌, ಮಾಜಿ ಉಪ ಮುಖ್ಯಮಂತ್ರಿ ಸಿಸೋಡಿಯಾ ಹಾಗೂ ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಅವರು ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜೈಲು ಸೇರಿದ್ದರು. ಸಚಿವರಾಗಿದ್ದ ಸತ್ಯೇಂದ್ರ ಜೈನ್‌ ಅವರೂ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು.

ಎಎಪಿಯು ತಮ್ಮ ಅಗ್ರ ನಾಯಕರ ಬಂಧನವನ್ನು 'ಪಿತೂರಿ' ಎಂದು ಟೀಕಿಸಿದರೂ, ಬಿಜೆಪಿಯು ಅವನ್ನೆಲ್ಲ ಮೀರಿ ನಿಂತಿದೆ ಹಾಗೂ ಜನರು ಎಎಪಿಯನ್ನು ತಿರಸ್ಕರಿಸಿದ್ದಾರೆ ಎಂಬುದು ಫಲಿತಾಂಶದಿಂದ ಸಾಬೀತಾಗಿದೆ.

  • ಕೇಂದ್ರ ಬಜೆಟ್‌

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡಿರುವುದು ದೆಹಲಿ ಮಟ್ಟಿಗೆ ಬಿಜೆಪಿಗೆ ಅನುಕೂಲವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

  • ಇಂಡಿಯಾ ಮೈತ್ರಿಯಲ್ಲಿ ಬಿರುಕು

ಬಿಜೆಪಿಯನ್ನು ಎದುರಿಸುವ ನಿಟ್ಟಿನಲ್ಲಿ, ಹಲವು ವಿರೋಧ ಪಕ್ಷಗಳು 2024ರ ಲೋಕಸಭಾ ಚುನಾವಣೆಗೂ ಮುನ್ನ 'ಇಂಡಿಯಾ' ಹೆಸರಿನಲ್ಲಿ ಒಂದಾಗಿದ್ದವು. ಬಿಜೆಪಿಯನ್ನು ಎದುರಾಳಿ ಎಂದು ಪರಿಗಣಿಸಿದ್ದ ಕಾಂಗ್ರೆಸ್‌ ಹಾಗೂ ಎಎಪಿ, ದೆಹಲಿ ಚುನಾವಣೆ ವೇಳೆ ಪರಸ್ಪರ ವಾಗ್ದಾಳಿ ನಡೆಸುತ್ತಾ ಸಾಗಿದ್ದು, ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು ಮೂಡಿರುವುದನ್ನು ಜಾಹೀರು ಮಾಡಿತು.

ಮೈತ್ರಿಕೂಟದಲ್ಲಿನ ಹಲವು ಪಕ್ಷಗಳು ಎಎಪಿಯನ್ನು ಬೆಂಬಲಿಸಿದ್ದವು. ಕಾಂಗ್ರೆಸ್‌ ಪ್ರತ್ಯೇಕ ಹೋರಾಟ ಮುಂದುವರಿಸಿತು. ಒಂದುವೇಳೆ, ಕಾಂಗ್ರೆಸ್‌ ಹಾಗೂ ಎಎಪಿ ಒಂದಾಗಿ, ಬಿಜೆಪಿ ವಿರೋಧಿ ಮತಗಳನ್ನು ಒಟ್ಟುಗೂಡಿಸಿದ್ದರೆ, ಫಲಿತಾಂಶ ಬೇರೆಯದ್ದೇ ರೀತಿ ಇರುತ್ತಿತ್ತು.

  • ಕಲುಷಿತ ಯಮುನಾ; ವಾಯು ಮಾಲಿನ್ಯ

ಯಮುನಾ ನದಿ ಮಾಲಿನ್ಯ; ಇದು ಹಿಂದಿನ ಹಲವು ಸರ್ಕಾರಗಳಿಂದಲೂ ಪರಿಹರಿಸಲಾಗದ ಸಮಸ್ಯೆ. ಕಳೆದೆರಡು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದರೂ, ಅದನ್ನು ಈಡೇರಿಸಲು ಎಎಪಿಗೂ ಸಾಧ್ಯವಾಗಿಲ್ಲ ಎಂಬುದನ್ನು ಕೇಜ್ರಿವಾಲ್‌ ಸಹ ಹಲವು ಸಂದರ್ಶನಗಳಲ್ಲಿ ಒಪ್ಪಿಕೊಂಡಿದ್ದರು.

ಇದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ಪ್ರಚಾರದ ಸಂದರ್ಭದಲ್ಲಿ ಎಎಪಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿತು. ಹಾಗೆಯೇ, ದೆಹಲಿ ವಾಯು ಮಾಲಿನ್ಯವನ್ನು ಹತೋಟಿಗೆ ತರುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಾದಿಸಿತು.

ಅಧಿಕಾರಕ್ಕೇರಿದರೆ, ರಾಷ್ಟ್ರ ರಾಜಧಾನಿಯ ಜನರ ಭವಿಷ್ಯವನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ನಗರದ ರಸ್ತೆಗಳಿಗೆ ಇ–ಬಸ್‌ಗಳನ್ನು ಇಳಿಸಲಾಗುವುದು ಎಂದು ಬಿಜೆಪಿ ಭರವಸೆ ನೀಡಿತ್ತು.

  • ಸಂಕಲ್ಪ ಪತ್ರಗಳು; ಕಲ್ಯಾಣ ಯೋಜನೆಗಳು

ಚುನಾವಣೆ ಪ್ರಣಾಳಿಕೆಯಲ್ಲಿನ ಕಲ್ಯಾಣ ಯೋಜನೆಗಳನ್ನು ಒಟ್ಟಿಗೆ ಘೋಷಿಸುವ ಬದಲು ಒಂದೊಂದಾಗಿ ಪ್ರಕಟಿಸಿದ್ದು, ಬಿಜೆಪಿಯ ಕೈ ಹಿಡಿಯಿತು. ನಿರಂತರವಾಗಿ ಸಂಕಲ್ಪ ಪತ್ರಗಳನ್ನು ಬಿಡುಗಡೆ ಮಾಡುವ ಮೂಲಕ, ತನ್ನ ಯೋಜನೆಗಳ ಬಗ್ಗೆ ಚುನಾವಣಾ ಪ್ರಚಾರದುದ್ದಕ್ಕೂ ಚರ್ಚೆಗಳು ನಡೆಯುವಂತೆ ಮಾಡಿದ್ದು, ಜನರನ್ನು ಸಳೆಯಿತು; ಯಶಸ್ಸನ್ನು ತಂದುಕೊಟ್ಟಿತು.

ಚುನಾವಣೆ ಫಲಿತಾಂಶ
ಒಟ್ಟು ಸ್ಥಾನಗಳು: 70
ಬಿಜೆಪಿ: 48
ಎಎಪಿ: 22

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.