ADVERTISEMENT

'ನಿರುದ್ಯೋಗಿ ನಾಯಕ': ಚುನಾವಣೆ ಸೋತು ಯುಟ್ಯೂಬ್ ಚಾನಲ್‌ ಆರಂಭಿಸಿದ ಎಎಪಿಯ ಸೌರಭ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2025, 5:22 IST
Last Updated 13 ಫೆಬ್ರುವರಿ 2025, 5:22 IST
   

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಎಎಪಿ ನಾಯಕ ಸೌರಭ್‌ ಭಾರದ್ವಾಜ್‌ ಅವರು ಯುಟ್ಯೂಬ್‌ ಚಾನಲ್‌ ಆರಂಭಿಸಿದ್ದಾರೆ. ತಮ್ಮ ಚಾನಲ್‌ಗೆ ಅವರು 'ನಿರುದ್ಯೋಗಿ ನಾಯಕ' ಎಂದು ಹೆಸರಿಟ್ಟಿದ್ದಾರೆ.

ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಸಲುವಾಗಿ 'ಬೆರೋಜ್‌ಗರ್ ನೇತಾಜಿ' (ನಿರುದ್ಯೋಗಿ ನಾಯಕ) ಚಾನಲ್ ಶುರು ಮಾಡಿರುವ ಸೌರಭ್‌ ಅವರು, ಎಎಪಿ ಅಧಿಕಾರದಿಂದ ಕೆಳಗಿಳಿದ ಬಳಿಕ ದೆಹಲಿ ಬದಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಜನರ ಪ್ರಶ್ನೆಗಳಿಗೆ 'ಮುಕ್ತ ಹಾಗೂ ಪಾರದರ್ಶಕ' ರೀತಿಯಲ್ಲಿ ಉತ್ತರ ನೀಡುವುದಾಗಿ ಹೇಳಿರುವ ಅವರು, ಪ್ರತಿದಿನವೂ ಹೊಸ ವಿಷಯಗಳೊಂದಿಗೆ ಕಾಣಿಸಿಕೊಳ್ಳುವ ಭರವಸೆ ನೀಡಿದ್ದಾರೆ. ಹಾಗೆಯೇ, ಜನರು ತಮ್ಮೊಂದಿಗೆ ಸಂವಾದ ನಡೆಸಲು ಈ ವೇದಿಕೆಯು ಅವಕಾಶ ಕಲ್ಪಿಸುತ್ತದೆ ಎಂದಿದ್ದಾರೆ.

ADVERTISEMENT

ತಮ್ಮ ಚಾನಲ್‌ ಅನ್ನು ಪರಿಚಯಿಸುವ 58 ಸೆಕೆಂಡುಗಳ ವಿಡಿಯೊವನ್ನು ಯುಟ್ಯೂಬ್‌ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅವರು, 'ಚುನಾವಣೆ ಸೋಲಿನ ಬಳಿಕ ನಾಯಕನ ಬದುಕಿನಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಆ ಮೂಲಕ ಜನರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ನನ್ನ ಪ್ರಯಾಣದ ಬಗ್ಗೆ ಹಾಗೂ ನಿಮ್ಮ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲು ಬಯಸುತ್ತೇನೆ. ನೀವೂ ಪ್ರಶ್ನೆಗಳನ್ನು ಕಳುಹಿಸಬಹುದು' ಎಂದು ಹೇಳಿದ್ದಾರೆ.

ಇಂದಿನಿಂದ ಹೊಸ ವಿಚಾರ ಹಾಗೂ ಹೊಸ ವಿಡಿಯೊದೊಂದಿಗೆ ಜನರ ಮುಂದೆ ಬರುವುದಾಗಿ ತಿಳಿಸಿದ್ದಾರೆ.

ಈ ಚಾನಲ್‌ಗೆ ಈಗಾಲೇ 52 ಸಾವಿರಕ್ಕೂ ಹೆಚ್ಚು ಮಂದಿ ಚಂದಾದಾರರಾಗಿದ್ದಾರೆ.

ವೃತ್ತಿಯಿಂದ ಎಂಜಿನಿಯರ್‌ ಆಗಿದ್ದ ಸೌರಭ್‌, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರ ಆಪ್ತ.

ಇತ್ತೀಚೆಗೆ ಮುಕ್ತಾಯವಾದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗ್ರೇಟರ್‌ ಕೈಲಾಶ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ಬಿಜೆಪಿಯ ಶಿಖಾ ರಾಯ್‌ ವಿರುದ್ಧ ಸೋಲು ಕಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.