ADVERTISEMENT

Delhi Elections: ಮೋದಿ ಅಥವಾ ದೇವರಿಂದಷ್ಟೇ ದೆಹಲಿ ಅಭಿವೃದ್ಧಿ ಸಾಧ್ಯ –BJP ಸಂಸದ

ಪಿಟಿಐ
Published 3 ಫೆಬ್ರುವರಿ 2025, 10:22 IST
Last Updated 3 ಫೆಬ್ರುವರಿ 2025, 10:22 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ವಿಚಾರವಾಗಿ ಲೋಕಸಭೆಯು ಇಂದು (ಸೋಮವಾರ) ರಣಾಂಗಣವಾಗಿ ಬದಲಾಯಿತು. ಬಿಜೆಪಿ ಸಂಸದ ರಾಮವೀರ್‌ ಸಿಂಗ್‌ ಬಿಧೂಡಿ ಅವರು, ಎಎಪಿ ಸರ್ಕಾರವು ಲೂಟಿಯಲ್ಲಿ ತೊಡಗಿದ್ದು, ರಾಷ್ಟ್ರ ರಾಜಧಾನಿಯು ನರಕವಾಗಿ ಬದಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಬಿಧೂಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೆಹಲಿಯಲ್ಲಿ ಕೈಗೊಂಡ ಉಪಕ್ರಮಗಳನ್ನು ಉಲ್ಲೇಖಿಸಿದ ಅವರು, ವಸತಿ, ಸಾರಿಗೆ, ಆರೋಗ್ಯದಂತಹ ಸೌಕರ್ಯಗಳು ಜನರ ಕೈ ತಪ್ಪುವಂತೆ ಎಎಪಿ ಸರ್ಕಾರವು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ದಕ್ಷಿಣ ದೆಹಲಿ ಕ್ಷೇತ್ರದ ಸಂಸದರಾಗಿರುವ ಬಿಧೂಡಿ, ಯಮುನಾ ನದಿ ದಡದಲ್ಲಿ ಜೀವವೈವಿಧ್ಯ ಪಾರ್ಕ್‌ಗಳ ಅಭಿವೃದ್ಧಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಎಕ್ಸ್‌ಪ್ರೆಸ್‌ ವೇ ನಿರ್ಮಾಣ, ಕೇಂದ್ರ ಕೈಗೊಂಡ ಮೂಲಸೌಕರ್ಯ ಯೋಜನೆಗಳನ್ನು ಪ್ರಸ್ತಾಪಿಸಿದರು.

'ಇಂತಹ ಕೆಲಸಗಳು ಸಾಧ್ಯವಾಗಲು ದೇವರೇ ಭೂಮಿಗಿಳಿಯಬೇಕು. ಇಲ್ಲವೇ, ಮೋದಿ ಅವರು ಚಮತ್ಕಾರ ಮಾಡಬೇಕು. ಇನ್ಯಾರಿಗೂ ಇವು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆದು, ಮೂರು ದಿನಗಳ ಬಳಿಕ (ಫೆ. 8ರಂದು) ಫಲಿತಾಂಶ ಪ್ರಕಟವಾಗಲಿದೆ.

'ಎಎಪಿ ಸರ್ಕಾರವು ದೆಹಲಿಯನ್ನು ಲೂಟಿ ಮಾಡಿದೆ. ದೆಹಲಿ ಇದೀಗ, ನರಕವಾಗಿ ಮಾರ್ಪಟ್ಟಿದೆ. ಮೋದಿ ಅವರ ಮಾರ್ಗದರ್ಶನದಲ್ಲಿ ಬಿಜೆಪಿಯು 50ಕ್ಕೂ ಅಧಿಕ ಸ್ಥಾನಗಳಲ್ಲಿ ಗೆದ್ದು ಫೆಬ್ರುವರಿ 8ರಂದು ಅಧಿಕಾರಕ್ಕೇರಲಿದೆ. ರಾಷ್ಟ್ರ ರಾಜಧಾನಿಯು ವಿಶ್ವದರ್ಜೆಯ ನಗರವಾಗಬೇಕು ಎಂಬ ಜನರ ಕನಸನ್ನು ಬಿಜೆಪಿ ಸಾಕಾರಗೊಳಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.