ನವದೆಹಲಿ: ಕೊರೊನಾವೈರಸ್‌ನ ಮೊದಲ ಅಲೆ ಸಂದರ್ಭದಲ್ಲಿ ದೆಹಲಿ ಸರ್ಕಾರವು, ವಲಸೆ ಕಾರ್ಮಿಕರು ರಾಷ್ಟ್ರ ರಾಜಧಾನಿಯಿಂದ ಹೊರನಡೆಯುವಂತೆ ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಸೋಮವಾರ ಆರೋಪ ಮಾಡಿದ್ದರು. ಈ ಹೇಳಿಕೆಯನ್ನು ಅಲ್ಲಗಳೆದಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪ್ರಧಾನಿ ಹೇಳಿಕೆಯು 'ಸಂಪೂರ್ಣ ಸುಳ್ಳು' ಎಂದು ಖಂಡಿಸಿದ್ದಾರೆ.
ಇದಾದ ಕೆಲವೇ ಹೊತ್ತಿನಲ್ಲಿಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು,ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ. ಪ್ರಧಾನಿ ಹೇಳಿಕೆಯನ್ನು ಟೀಕಿಸುವುದು ಖಂಡನೀಯ. ಕೇಜ್ರಿವಾಲ್ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಬಳಿಕಕೇಜ್ರಿವಾಲ್ ಮತ್ತು ಯೋಗಿ, ಟ್ವಿಟರ್‌ನಲ್ಲಿ ಪರಸ್ಪರ ಟೀಕಾಪ್ರಹಾರ ನಡೆಸಿದ್ದಾರೆ.
'ಕೇಜ್ರಿವಾಲ್ ಅವರಿಗೆ ಸುಳ್ಳು ಹೇಳುವ ಜಾಣ್ಮೆ ಇದೆ. ಕೊವಿಡ್‌ನಂತಹ ಜಾಗತಿಕ ಪಿಡುಗಿನ ವಿರುದ್ಧ ಗೌರವಾನ್ವಿತ ಪ್ರಧಾನಿಯವರ ನೇತೃತ್ವದಲ್ಲಿ ಇಡೀ ದೇಶವೇ ಹೋರಾಟ ನಡೆಸುತ್ತಿದ್ದಾಗ, ಕೇಜ್ರಿವಾಲ್ ಅವರು ವಲಸೆ ಕಾರ್ಮಿಕರಿಗೆ ದೆಹಲಿಯಿಂದ ಹೊರನಡೆಯುವ ದಾರಿ ತೋರುತ್ತಿದ್ದರು' ಎಂದು ಯೋಗಿ ಟ್ವೀಟ್ ಮಾಡಿದ್ದಾರೆ.
ಮುಂದುವರಿದು, ವಲಸಿಗರಿಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕತ್ತರಿಸಲಾಗಿತ್ತು. ಮಲಗಿದ್ದವರನ್ನೆಲ್ಲ ಎಬ್ಬಿಸಿ, ಬಸ್ಸುಗಳಲ್ಲಿ ಉತ್ತರ ಪ್ರದೇಶದ ಗಡಿಗೆ ತಂದು ಬಿಡಲಾಯಿತು ಎಂದು ಆರೋಪಿಸಿದ್ದಾರೆ.
'ಕೇಳಿಸಿಕೊಳ್ಳಿ ಕೇಜ್ರಿವಾಲ್, ಕೋವಿಡ್ ಪ್ರಭಾವದಿಂದ ಇಡೀ ಮನುಕುಲವೇ ತತ್ತರಿಸಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದ ಕಾರ್ಮಿಕರನ್ನು ದೆಹಲಿಯಿಂದ ಹೊರನಡೆಯುವಂತೆ ಬಲವಂತ ಮಾಡಿದ್ದೀರಿ. ಸಣ್ಣ ಮಕ್ಕಳು ಮತ್ತು ಮಹಿಳೆಯರನ್ನು ಮಧ್ಯರಾತ್ರಿ ವೇಳೆ ಉತ್ತರ ಪ್ರದೇಶ ಗಡಿಯಲ್ಲಿ ಅಸಹಾಯಕವಾಗಿ ಬಿಟ್ಟುಹೋಗುವಂತಹಪ್ರಜಾಸತ್ತಾತ್ಮಕವಲ್ಲದ ಮತ್ತು ಅಮಾನವೀಯ ಕೃತ್ಯವನ್ನುನಿಮ್ಮ ಸರ್ಕಾರ ನಡೆಸಿದೆ. ನಿಮ್ಮನ್ನು ಮಾನವೀಯತೆಯ ವಿರೋಧಿ ಎಂದು ಕರೆಯೋಣವೇ ಅಥವಾ..' ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಕೇಜ್ರಿವಾಲ್, 'ಕೇಳಿಸಿಕೊಳ್ಳಿ ಯೋಗಿ, ಅದನ್ನು ಬಿಡಿ. ಉತ್ತರ ಪ್ರದೇಶದ ಜನರ ಶವಗಳು ನದಿಯಲ್ಲಿ ತೇಲುತ್ತಿದ್ದವು. ಆದಾಗ್ಯೂ ಕೋಟ್ಯಂತರ ರೂಪಾಯಿ ವ್ಯಯಿಸಿ ಟೈಮ್ಸ್ ನಿಯತಕಾಲಿಕೆಯಲ್ಲಿ ನಿಮ್ಮ ಸುಳ್ಳು ಪ್ರಚಾರದ ಜಾಹೀರಾತುಗಳನ್ನು ನೀಡಿದ್ದೀರಿ. ನಿಮ್ಮಂತಹ ಕೆಟ್ಟ ಮತ್ತು ಕ್ರೂರ ಆಡಳಿತಗಾರನನ್ನು ನಾನು ಹಿಂದೆಂದೂ ನೋಡಿಲ್ಲ' ಎಂದು ಚಾಟಿ ಬೀಸಿದ್ದಾರೆ.
ವಿರೋಧ ಪಕ್ಷಗಳ ವಿರುದ್ಧಸಂಸತ್‌ನಲ್ಲಿ ವಾಗ್ದಾಳಿ ನಡೆಸಿದ್ದ ಪ್ರಧಾನಿ ಮೋದಿ, ವಲಸೆ ಕಾರ್ಮಿಕರನ್ನು ಮುಂಬೈ ಮತ್ತು ದೆಹಲಿಯಿಂದ ಬಲವಂತವಾಗಿ ಹೊರಗೆ ಕಳುಹಿಸುವ ಮೂಲಕ ಕಾಂಗ್ರೆಸ್ ಮತ್ತು ಎಎಪಿ ಸರ್ಕಾರಗಳು, ಕೋವಿಡ್ ವ್ಯಾಪಕವಾಗಿ ಹರಡಲು ಕಾರಣವಾದವು ಎಂದು ಗಂಭೀರ ಆರೋಪ ಮಾಡಿದ್ದರು.
'ಕಾಂಗ್ರೆಸ್ ಪಕ್ಷವು ಮುಂಬೈನಿಂದ ತೆರಳಲು ವಲಸೆ ಕಾರ್ಮಿಕರಿಗೆ ಉಚಿತವಾಗಿ ರೈಲು ಟಿಕೆಟ್ ನೀಡಿತ್ತು. ಅದೇರೀತಿ ದೆಹಲಿ ಸರ್ಕಾರ, ಜೀಪ್‌ಗಳು ಹಾಗೂ ಧ್ವನಿವರ್ಧಕಗಳೊಂದಿಗೆ ಸ್ಲಂಗಳತ್ತ ತೆರಳಿ, ನಗರದಿಂದ ಹೊರಗೆ ಹೋಗಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಘೋಷಿಸಿತ್ತು. ಇದು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡಗಳಲ್ಲಿ ಕೋವಿಡ್ ವ್ಯಾಪಕವಾಗಿ ಹರಡಲು ಕಾರಣವಾಯಿತು' ಎಂದು ಮೋದಿ ಹೇಳಿದ್ದರು.
ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಕೇಜ್ರಿವಾಲ್, 'ಮೋದಿ ಹೇಳಿಕೆಯು ಸಂಪೂರ್ಣ ಸುಳ್ಳು. ಕೋವಿಡ್ ಅವಧಿಯಲ್ಲಿ ಸಂಕಷ್ಟಕ್ಕೀಡಾದವರು ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳದುಕೊಂಡವರಿಗಾಗಿ ಪ್ರಧಾನಿ ಮೋದಿ ಸಂವೇದನಾಶೀಲರಾಗಿರುತ್ತಾರೆ ಎಂದು ದೇಶ ಭಾವಿಸುತ್ತದೆ. ಜನರ ಸಂಕಷ್ಟದ ಮೇಲೆ ರಾಜಕೀಯ ಮಾಡುವುದು ಪ್ರಧಾನಿಗೆ ಸರಿಹೊಂದುವುದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.