ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ದಾಳಿ ನಡೆಸಿದ ಆರೋಪಿ ಸಕ್ರಿಯಾ ರಾಜೇಶ್
–ಪಿಟಿಐ ಚಿತ್ರಗಳು
ನವದೆಹಲಿ: ‘ಇದು ನನ್ನ ಮೇಲೆ ಮಾತ್ರ ನಡೆದ ದಾಳಿಯಲ್ಲ. ಬದಲಾಗಿ ದೆಹಲಿಯ ಜನರಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ನಡೆದ ಹೇಡಿತನದ ಪ್ರಯತ್ನವಾಗಿದೆ’ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದ್ದಾರೆ.
‘ಇಂದು ಬೆಳಿಗ್ಗೆ ‘ಜನ ಸುನ್‌ವಾಯೀ’ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ನನ್ನ ಮೇಲೆ ದಾಳಿ ನಡೆಯಿತು. ಇದು ನನ್ನ ಮೇಲೆ ಮಾತ್ರ ನಡೆದ ದಾಳಿಯಲ್ಲ. ಬದಲಾಗಿ ದೆಹಲಿಯ ಜನರಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ನಡೆದ ಹೇಡಿತನದ ಪ್ರಯತ್ನವಾಗಿದೆ’ ಎಂದು ರೇಖಾ ಗುಪ್ತಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ದಾಳಿಯ ನಂತರ ನಾನು ಆಘಾತಕ್ಕೊಳಗಾಗಿದ್ದೆ. ಆದರೆ, ಈಗ ಚೇತರಿಸಿಕೊಂಡಿದ್ದೇನೆ. ‘ಜನ ಸುನ್‌ವಾಯೀ’ ಕಾರ್ಯಕ್ರಮವನ್ನು ಮೊದಲಿನಂತೆಯೇ ಮತ್ತಷ್ಟು ಬದ್ಧತೆಯೊಂದಿಗೆ ಮುಂದುವರಿಸಲಾಗುತ್ತದೆ. ನಿಮ್ಮ ನಂಬಿಕೆ ಮತ್ತು ಬೆಂಬಲವೇ ನನ್ನ ದೊಡ್ಡ ಶಕ್ತಿ’ ಎಂದು ಅವರು ತಿಳಿಸಿದ್ದಾರೆ.
'ಇಂತಹ ದಾಳಿಗಳು ನನ್ನ ಚೈತನ್ಯ ಅಥವಾ ಜನರಿಗೆ ಸೇವೆ ಸಲ್ಲಿಸುವ ನನ್ನ ಸಂಕಲ್ಪವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಈಗ ನಾನು ಮೊದಲಿಗಿಂತ ಹೆಚ್ಚಿನ ಶಕ್ತಿ ಮತ್ತು ಸಮರ್ಪಣೆಯೊಂದಿಗೆ ನಿಮ್ಮೊಂದಿಗೆ ಇರುತ್ತೇನೆ’ ಎಂದು ಅವರು ಭರವಸೆ ನೀಡಿದ್ದಾರೆ.
‘ನಾನು ಶೀಘ್ರದಲ್ಲೇ ನಿಮ್ಮ ನಡುವೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ. ನಿಮ್ಮ ಅಪಾರ ಪ್ರೀತಿ, ಆಶೀರ್ವಾದ ಮತ್ತು ಶುಭ ಹಾರೈಕೆಗಳಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇನೆ’ ಎಂದು ಗುಪ್ತಾ ಹೇಳಿದ್ದಾರೆ.
ಉತ್ತರ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಕ್ಯಾಂಪ್ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ ರೇಖಾ ಗುಪ್ತಾ ಅವರು ವಾರದ ‘ಜನ ಸುನ್‌ವಾಯೀ’ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಅವರ ಮೇಲೆ ದಾಳಿ ನಡೆಸಲಾಗಿತ್ತು. ವ್ಯಕ್ತಿಯೊಬ್ಬ ಸಿಎಂ ಕಪಾಳಕ್ಕೆ ಹೊಡೆದಿದ್ದ. ಘಟನೆ ಸಂಬಂಧ ಗುಜರಾತ್‌ನ ರಾಜ್‌ಕೋಟ್ ನಿವಾಸಿ 41 ವರ್ಷದ ಸಕ್ರಿಯಾ ರಾಜೇಶ್ ಖಿಮ್‌ಜಿನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.