ADVERTISEMENT

ಭಾರತ ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು:ಸೋನಿಯಾಗೆ ಕೋರ್ಟ್ ನೋಟಿಸ್

ಪಿಟಿಐ
Published 9 ಡಿಸೆಂಬರ್ 2025, 11:49 IST
Last Updated 9 ಡಿಸೆಂಬರ್ 2025, 11:49 IST
<div class="paragraphs"><p>ಸೋನಿಯಾ ಗಾಂಧಿ</p></div>

ಸೋನಿಯಾ ಗಾಂಧಿ

   

(ಪಿಟಿಐ ಚಿತ್ರ)

ನವದೆಹಲಿ: ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಆರೋಪ ಕುರಿತು ತನಿಖೆಗೆ ನಿರಾಕರಿಸಿರುವ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಬಗ್ಗೆ ಪ‍್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಪೊಲೀಸರಿಗೆ ದೆಹಲಿ ಹೈಕೋರ್ಟ್‌ ನೋಟಿಸ್ ಜಾರಿ ಮಾಡಿದೆ.

ADVERTISEMENT

ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಮೂರ್ತಿ ವಿಶಾಲ್ ಗೋಗ್ನೆ ಅವರು ಸೋನಿಯಾ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಿದ್ದಾರೆ.

ಸೋನಿಯಾ ಅವರು ಭಾರತದ ಪೌರತ್ವ ಪಡೆಯುವ ಮೊದಲೇ 1980ರಲ್ಲಿ ಅವರ ಹೆಸರು ನವದೆಹಲಿಯ ಮತದಾರರ ಪಟ್ಟಿಯಲ್ಲಿತ್ತು. ಈ ಮೂಲಕ ಅವರು ಅಕ್ರಮ ಎಸಗಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಕೋರಿ ವಕೀಲ ವಿಕಾಸ್‌ ತ್ರಿಪಾಠಿ ಅವರು ಅರ್ಜಿ ಸಲ್ಲಿಸಿದ್ದರು.

‘ಕಾನೂನು ಬದ್ಧವಲ್ಲದ, ಪೂರಕ ದಾಖಲೆಗಳಿಲ್ಲದ ಆರೋಪಗಳ ಮೂಲಕ ನ್ಯಾಯಾಲಯದ ವ್ಯಾಪ್ತಿಗೆ ಬರದ ವಿಚಾರದ ಬಗ್ಗೆ ತನಿಖೆಗೆ ಆದೇಶಿಸುವಂತೆ ಕೋರಲಾಗಿದೆ. ನ್ಯಾಯಾಲಯ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಾಗುವುದಿಲ್ಲ’ ಎಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.

ಈಚೆಗೆ ಮತ ಕಳವು ಆರೋಪ ಮಾಡುತ್ತಿದ್ದ ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದ್ದ ಬಿಜೆಪಿ, ‘ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತದ ಪ್ರಜೆಯಾಗುವುದಕ್ಕೂ ಮುನ್ನವೇ ಮತದಾರರಾಗಿ ದಾಯಿಸಿಕೊಂಡಿದ್ದರು’ ಎಂದು ಆರೋಪ ಮಾಡಿತ್ತು.

‘ದೇಶದ ಪೌರತ್ವ ಪಡೆಯುವುದಕ್ಕೂ ಮುನ್ನ, ಅಂದರೆ ಇಟಲಿ ಪೌರತ್ವ ಹೊಂದಿದ್ದಾಗಲೇ ಭಾರತದ ಮತದಾರರ ಪಟ್ಟಿಯಲ್ಲಿ ಸೇರುವುದು ಎಂದರೆ ಅದು ಚುನಾವಣಾ ಕಾನೂನಿನ ಸ್ಪಷ್ಟ ಉಲ್ಲಂಘನೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ‘ಎಕ್ಸ್‌’ನಲ್ಲಿ ಹೇಳಿದ್ದರು.

‘ಸೋನಿಯಾ ಗಾಂಧಿ ಅವರು ಭಾರತದ ಪೌರತ್ವ ಪಡೆಯುವುದಕ್ಕೂ ಮುನ್ನವೇ, ಅಂದರೆ 1980ರ ಜನವರಿ 1ರಂದು ಅವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದಾಗ 1982ರಲ್ಲಿ ಹೆಸರನ್ನು ತೆಗೆಯಲಾಗಿತ್ತು. ನಂತರ ಅವರ ಹೆಸರು 1983ರಲ್ಲಿ ಮತ್ತೆ ನೋಂದಣಿಯಾಯಿತು. ಅದೂ ಕೂಡ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಏಕೆಂದರೆ ನೋಂದಣಿಗೆ ಅರ್ಹತಾ ದಿನಾಂಕ 1983ರ ಜನವರಿ 1 ಆಗಿತ್ತು. ಆದರೆ ಸೋನಿಯಾ ಗಾಂಧಿ ಅವರಿಗೆ ಭಾರತದ ಪೌರತ್ವ ದೊರೆತದ್ದು 1983ರ ಏಪ್ರಿಲ್‌ 30ರಂದು. ಅಲ್ಲಿಯವರೆಗೂ ಅವರು ಇಟಲಿಯ ಪೌರತ್ವವನ್ನೇ ಹೊಂದಿದ್ದರು’ ಎಂದು ಅವರು ವಿವರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.