ದೆಹಲಿಯ ಪ್ರಶಾಂತ್ ವಿಹಾರ ಪ್ರದೇಶದಲ್ಲಿರುವ ಸಿಆರ್‌ಪಿಎಫ್ ಶಾಲೆ ಬಳಿ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭದ್ರತಾಪಡೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು
ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಸಿಆರ್‌ಪಿಎಫ್ ಶಾಲೆ ಬಳಿ ಸಂಭವಿಸಿದ್ದ ಸ್ಫೋಟ ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ದೆಹಲಿ ಪೊಲೀಸರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟೆಲಿಗ್ರಾಮ್‌ನಿಂದ ‘ಜಸ್ಟೀಸ್ ಲೀಗ್ ಇಂಡಿಯಾ’ ಚಾನೆಲ್ ಕುರಿತು ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ಸ್ಫೋಟದ ಬಳಿಕ ಘಟನೆ ಕುರಿತಾದ ಸಿಸಿಟಿವಿ ದೃಶ್ಯಗಳನ್ನು ಒಳಗೊಂಡ ಪೋಸ್ಟ್‌ವೊಂದನ್ನು ಟೆಲಿಗ್ರಾಮ್ ಚಾನಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಜತೆಗೆ, ಘಟನೆಗೆ ಸಂಬಂಧಿಸಿ ಇತರ ಸಾಮಾಜಿಕ ಮಾಧ್ಯಮಗಳಿಂದಲೂ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ರೋಹಿಣಿ ಪ್ರದೇಶದ ಪ್ರಶಾಂತ್ ವಿಹಾರದಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ಶಾಲೆಯ ಆವರಣ ಗೋಡೆ ಹಾಗೂ ಸಮೀಪದ ಕೆಲ ಅಂಗಡಿಗಳಿಗೆ ಹಾನಿಯುಂಟಾಗಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ.
‘ಸ್ಫೋಟದ ತೀವ್ರತೆಯಿಂದಾಗಿ ಉಂಟಾದ ಕಂಪನ, ಘಟನಾ ಸ್ಥಳದಿಂದ ದೂರವಿರುವ ಮನೆಗಳಲ್ಲಿಯೂ ಅನುಭವಕ್ಕೆ ಬಂತು. ರಾಸಾಯನಿಕ ವಸ್ತುವೊಂದರ ವಾಸನೆಯಿಂದ ಕೂಡಿದ ಬಿಳಿ ಬಣ್ಣದ ದಟ್ಟ ಹೊಗೆ ಘಟನಾ ಸ್ಥಳದಲ್ಲಿ ತುಂಬಿಕೊಂಡಿತ್ತು’ ಎಂಬ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.