ADVERTISEMENT

Delhi | ಆಡಳಿತ ವಿರೋಧಿ ಅಲೆ ಸೃಷ್ಟಿಸಿದ್ದೆವು, ಆದರೂ ಜನಾದೇಶ ಸಿಗಲಿಲ್ಲ: ಖರ್ಗೆ

ಪಿಟಿಐ
Published 9 ಫೆಬ್ರುವರಿ 2025, 2:25 IST
Last Updated 9 ಫೆಬ್ರುವರಿ 2025, 2:25 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ನಾವು ಆಡಳಿತ ವಿರೋಧಿ ಅಲೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದೆವು. ಆದರೂ ಜನರು ನಮಗೆ ಜನಾದೇಶವನ್ನು ನೀಡಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಫೆಬ್ರುವರಿ 8ರಂದು (ಶನಿವಾರ) ಪ್ರಕಟಗೊಂಡಿದೆ. ಬಿಜೆಪಿ 48 ಸ್ಥಾನಗಳನ್ನು ಗೆದ್ದು 26 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮತ್ತೊಂದೆಡೆ ಆಡಳಿತಾರೂಢ ಎಎಪಿಗೆ ಅಧಿಕಾರ ನಷ್ಟವಾಗಿದ್ದು, 22 ಸ್ಥಾನಗಳಿಗೆ ಸೀಮಿತಗೊಂಡಿದೆ.

ಕಾಂಗ್ರೆಸ್ ಸತತ ಮೂರನೇ ಸಲವೂ ಒಂದೇ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. 1998ರಿಂದ 2013ರವರೆಗೆ 15 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು.

ADVERTISEMENT

ಪಕ್ಷದ 'ಶೂನ್ಯ' ಸಾಧನೆ ಬಳಿಕ ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, 'ಜನರ ಹಿತದೃಷ್ಟಿಯಲ್ಲಿ ನಾವು ಸರ್ಕಾರಿ ವಿರೋಧಿ ಅಲೆ ಸೃಷ್ಟಿಸಿದ್ದೆವು. ಆದರೆ ನಾವು ನಿರೀಕ್ಷೆ ಮಾಡಿದಂತೆ ಜನಾದೇಶ ಸಿಗಲಿಲ್ಲ. ಜನರ ತೀರ್ಪನ್ನು ನಾವು ಸ್ವೀಕರಿಸುತ್ತೇವೆ' ಎಂದು ಹೇಳಿದ್ದಾರೆ.

'ಈ ಕಠಿಣ ಪರಿಸ್ಥಿತಿಯಲ್ಲೂ ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತನೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಆದರೆ ಇನ್ನೂ ಹೆಚ್ಚಿನ ಪರಿಶ್ರಮ ಹಾಗೂ ಹೋರಾಟದ ಅಗತ್ಯವಿದೆ' ಎಂದು ಹೇಳಿದ್ದಾರೆ.

'ಮುಂಬರುವ ದಿನಗಳಲ್ಲಿ ದೆಹಲಿಯ ಮಾಲಿನ್ಯ, ಯಮುನಾ ನದಿ ಶುದ್ಧೀಕರಣ, ವಿದ್ಯುತ್, ರಸ್ತೆ, ನೀರು ಸೇರಿದಂತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೋರಾಟ ಮುಂದುವರಿಯಲಿದೆ. ನಾವು ಜನರೊಂದಿಗೆ ಇರಲಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.