ADVERTISEMENT

Delhi Elections Results | ಬಲ ಕಳೆದುಕೊಂಡ ‘ಇಂಡಿಯಾ’ ಮೈತ್ರಿಕೂಟ

ವಿರೋಧ ಪಕ್ಷಗಳ ನಾಯಕರ ನಡುವೆ ಆಂತರಿಕ ಭಿನ್ನಾಭಿಪ್ರಾಯ

ಪಿಟಿಐ
Published 8 ಫೆಬ್ರುವರಿ 2025, 14:29 IST
Last Updated 8 ಫೆಬ್ರುವರಿ 2025, 14:29 IST
<div class="paragraphs"><p>ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಬಿಕೊ ಎನ್ನುತ್ತಿದ್ದ ಎಎಪಿ ಕಚೇರಿ </p></div>

ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಬಿಕೊ ಎನ್ನುತ್ತಿದ್ದ ಎಎಪಿ ಕಚೇರಿ

   

–ಪಿಟಿಐ ಚಿತ್ರ

ನವದೆಹಲಿ: ‘ಇಂಡಿಯಾ’ ಮೈತ್ರಿಕೂಟವು ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿ ಎಂಟು ತಿಂಗಳು ಮಾತ್ರ ಕಳೆದಿದೆ. ಆದರೆ, ಆಂತರಿಕ ಭಿನ್ನಾಭಿಪ್ರಾಯ ಹಾಗೂ ವಿವಿಧ ಪಕ್ಷಗಳ ಗುರಿ ಬೇರೆಬೇರೆ ಆಗಿರುವ ಪರಿಣಾಮವಾಗಿ ವಿಧಾನಸಭಾ ಚುನಾವಣೆಗಳಲ್ಲಿ ಮೈತ್ರಿಕೂಟವು ಕಳಪೆ ಸಾಧನೆ ತೋರುತ್ತಿದ್ದು, ಅದರ ಬಲವು ರಾಜಕೀಯವಾಗಿ ಕುಂದುತ್ತಿರುವಂತೆ ಕಾಣುತ್ತಿದೆ.

ADVERTISEMENT

ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯು ಮತ್ತೆ ಚಾಲಕನ ಸ್ಥಾನಕ್ಕೆ ಬಂದು ಕುಳಿತಿದೆ. ದೆಹಲಿಯಲ್ಲಿ ಎಎಪಿ ನೇತೃತ್ವದ ಸರ್ಕಾರವು ಅಧಿಕಾರ ಕಳೆದುಕೊಂಡಿರುವುದರ ಪರಿಣಾಮವಾಗಿ ರಾಷ್ಟ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನೇತೃತ್ವದ ಸರ್ಕಾರಗಳ ಸಂಖ್ಯೆಯು ಎಂಟಕ್ಕೆ ಕುಸಿದಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯದಂತೆ ಮಾಡಲು ‘ಇಂಡಿಯಾ’ ಮೈತ್ರಿಕೂಟಕ್ಕೆ ಸಾಧ್ಯವಾಗಲಿಲ್ಲವಾದರೂ, ಬಿಜೆಪಿಗೆ ಸ್ವಂತ ಬಲದ ಮೇಲೆ ಅಧಿಕಾರ ರಚಿಸಲು ಸಾಧ್ಯವಾಗದಂತೆ ಮಾಡಿದ್ದು ಕಡಿಮೆ ಸಾಧನೆಯೇನೂ ಅಲ್ಲ.

ಮೈತ್ರಿಕೂಟವು ಲೋಕಸಭಾ ಚುನಾವಣೆಗೆ ಸೀಮಿತ, ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಮೈತ್ರಿಯನ್ನು ಮುಂದುವರಿಸಲಾಗುತ್ತದೆ ಎಂದು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಮೊದಲಿನಿಂದಲೂ ಹೇಳುತ್ತಿವೆ. ಆದರೆ ವಿಧಾನಸಭಾ ಚುನಾವಣೆಗಳ ಸಂದರ್ಭದ ಆರೋಪ–ಪ್ರತ್ಯಾರೋಪಗಳು ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟದಲ್ಲಿ ಬಿರುಕು ಮೂಡಲು ಕಾರಣವಾಗಬಹುದು ಎಂಬುದು ಆರಂಭದಲ್ಲಿ ಆಲೋಚನೆಗೆ ಬಂದಿರಲಿಲ್ಲ.

ಆದರೆ, ‘ಇಂಡಿಯಾ’ ಮೈತ್ರಿಕೂಟದ ಅತಿದೊಡ್ಡ ಪಕ್ಷವಾದ ಕಾಂಗ್ರೆಸ್, ದೆಹಲಿ ಚುನಾವಣೆಯ ಸಂದರ್ಭದಲ್ಲಿ ಎಎಪಿ ವಿರುದ್ಧ ಭಾರಿ ಪ್ರಚಾರ ನಡೆಸಿತು. ಇದರ ಪರಿಣಾಮವಾಗಿ ಎರಡೂ ಪಕ್ಷಗಳ ನಡುವೆ ತೀವ್ರ ಸ್ವರೂಪದ ಆರೋಪ–ಪ್ರತ್ಯಾರೋಪ ದಾಖಲಾದವು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಎಎಪಿ ಮತ್ತು ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು. ಕೇಜ್ರಿವಾಲ್ ಅವರು ‘ಅಬಕಾರಿ ಹಗರಣದ ರೂವಾರಿ’ ಎಂದು ಜರಿದರು.

ಆದರೆ ‘ಇಂಡಿಯಾ’ ಮೈತ್ರಿಕೂಟದ ಎಸ್‌ಪಿ ಮತ್ತು ಟಿಎಂಸಿ ಪಕ್ಷಗಳು ಎಎಪಿಗೆ ಬೆಂಬಲ ವ್ಯಕ್ತಪಡಿಸಿದವು. ಮೈತ್ರಿಕೂಟದಲ್ಲಿ ಕಾಂಗ್ರೆಸ್ ಹಾಗೂ ಸಣ್ಣ ಪಕ್ಷಗಳ ನಡುವಿನ ಅಂತರವು ಹೆಚ್ಚಾಗುತ್ತ ಸಾಗಿದೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಇದು ಕಾಣುತ್ತಿದೆ. ಈ ಎರಡೂ ಕಡೆಗಳಲ್ಲಿ ಮೈತ್ರಿ ಸಾಧಿಸಲು ಎಎಪಿ ಮತ್ತು ಕಾಂಗ್ರೆಸ್ಸಿಗೆ ಆಗಲಿಲ್ಲ.

ಬಿಹಾರ ವಿಧಾನಸಭಾ ಚುನಾವಣೆಯ ವಿಚಾರದಲ್ಲಿ ‘ಇಂಡಿಯಾ’ ಮೈತ್ರಿಕೂಟವು ಒಗ್ಗಟ್ಟಿನಿಂದ ಇರುವಂತೆ ಕಾಣುತ್ತಿದೆ. ಆದರೆ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವುದು ಕಷ್ಟಸಾಧ್ಯ.

ದೆಹಲಿ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರದಲ್ಲಿ ‘ಇಂಡಿಯಾ’ ಮೈತ್ರಿಕೂಟದ ವಿವಿಧ ಪಕ್ಷಗಳ ನಾಯಕರಲ್ಲಿನ ಅಸಮಾಧಾನವು ವ್ಯಕ್ತವಾಗಲು ಆರಂಭಿಸಿದೆ. ‘ಪರಸ್ಪರರೊಂದಿಗೆ ಕಚ್ಚಾಟ ಮುಂದುವರಿಸೋಣ’ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ವ್ಯಂಗ್ಯವಾಗಿ ಹೇಳಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಡುವಿನ ಭಿನ್ನಮತವು ದೆಹಲಿಯಲ್ಲಿ ಬಿಜೆಪಿಗೆ ಉತ್ತಮ ಸಾಧನೆ ತೋರಲು ನೆರವಾಗಿದೆ ಎಂದು ಸಿಪಿಎಂ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಹೇಳಿವೆ. ಕಾಂಗ್ರೆಸ್ಸನ್ನು ನೇರವಾಗಿ ಟೀಕಿಸಿರುವ ಸಿಪಿಎಂ, ದೆಹಲಿಯಲ್ಲಿ ಬಿಜೆಪಿಗೆ ಗೆಲುವು ಸಾಧಿಸಲು ಕಾಂಗ್ರೆಸ್ ಪಕ್ಷ ನೆರವಾಗಿದೆ ಎಂದು ಹೇಳಿದೆ.

‘ಇಂಡಿಯಾ’ ಮೈತ್ರಿಕೂಟವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಕಾಂಗ್ರೆಸ್ ಸಹಕಾರ ನೀಡಿಲ್ಲ.
ಟಿ.ಪಿ. ರಾಮಕೃಷ್ಣನ್ ಸಿಪಿಎಂ ನಾಯಕ
‘ಇಂಡಿಯಾ’ ಮೈತ್ರಿಕೂಟದ ಪಾಲುದಾರ ಪಕ್ಷಗಳು ಒಂದಾಗಿದ್ದಿದ್ದರೆ ದೆಹಲಿಯಲ್ಲಿ ಬಿಜೆಪಿ ಗೆಲ್ಲುತ್ತಿರಲಿಲ್ಲ. ಮೈತ್ರಿಕೂಟದ ಎಲ್ಲರೂ ಈ ವಿಚಾರದ ಬಗ್ಗೆ ಚರ್ಚಿಸಬೇಕು.
ಪಿ.ಕೆ. ಕುಞ್ಞಾಲಿಕುಟ್ಟಿ ಐಯುಎಂಎಲ್ ನಾಯಕ

ಕಾಂಗ್ರೆಸ್ ನಿಲುವು

ಪ್ರಧಾನಿ ನರೇಂದ್ರ ಮೋದಿ ಅವರು 2015 ಹಾಗೂ 2020ರಲ್ಲಿ ಜನಪ್ರಿಯತೆಯ ಶಿಖರದಲ್ಲಿದ್ದರು. ಆಗ ದೆಹಲಿಯಲ್ಲಿ ಎಎಪಿ ಗೆಲುವು ಸಾಧಿಸಿತ್ತು. ಈಗ ದೆಹಲಿಯಲ್ಲಿ ಮತದಾರರು ನೀಡಿರುವ ಆದೇಶವು ಪ್ರಧಾನಿಯವರ ನೀತಿಗಳ ಗೆಲುವು ಎನ್ನುವುದಕ್ಕಿಂತಲೂ ಇದು ಅರವಿಂದ ಕೇಜ್ರಿವಾಲ್ ಅವರ ನೀತಿಗಳನ್ನು ತಿರಸ್ಕರಿಸುವ ಬಗೆಯಾಗಿ ಕಾಣುತ್ತಿದೆ.
ಜೈರಾಮ್ ರಮೇಶ್‌ ಎಐಸಿಸಿ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.