ADVERTISEMENT

ದೆಹಲಿ | ಪೊಲೀಸ್ ಮೇಲ್ವಿಚಾರಣೆಯಲ್ಲಿ ಪ್ರಚಾರ ನಡೆಸಿದ ದೆಹಲಿ ಗಲಭೆ ಪ್ರಕರಣದ ಆರೋಪಿ

ಪಿಟಿಐ
Published 29 ಜನವರಿ 2025, 7:20 IST
Last Updated 29 ಜನವರಿ 2025, 7:20 IST
<div class="paragraphs"><p>ತಾಹಿರ್ ಹುಸೇನ್</p></div>

ತಾಹಿರ್ ಹುಸೇನ್

   

Credit: X/@ANI

ನವದೆಹಲಿ: 2020ರ ದೆಹಲಿ ಗಲಭೆ ಪ್ರಕರಣದ ಆರೋಪಿ, ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಬುಧವಾರ ಪೊಲೀಸ್ ಮೇಲ್ವಿಚಾರಣೆಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ADVERTISEMENT

ತಾಹಿರ್ ಹುಸೇನ್ ಅವರು ಮುಸ್ತಫಾಬಾದ್‌ ಕ್ಷೇತ್ರದಿಂದ ಎಐಎಂಐಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್, ತಾಹಿರ್ ಹುಸೇನ್ ಅವರಿಗೆ ಆರು ದಿನಗಳ ಕಸ್ಟಡಿ ಪೆರೋಲ್ ನೀಡಿದೆ.

ಇಂದು ಬೆಳಿಗ್ಗೆ ತಿಹಾರ್ ಜೈಲಿನಿಂದ ಹೊರಬಂದ ಅವರು ಬಿಗಿ ಭದ್ರತೆಯಲ್ಲಿ ಮುಸ್ತಫಾಬಾದ್‌ನ ಪ್ರಮುಖ ರಸ್ತೆಗಳಲ್ಲಿ ಬೆಂಬಲಿಗರೊಂದಿಗೆ ಸಂವಾದ, ಪ್ರಚಾರ ಸಭೆಗಳನ್ನು ನಡೆಸಿದ್ದಾರೆ.

2020ರಲ್ಲಿ ಗಲಭೆ ನಡೆದಿದ್ದ ಕರವಾಲ್‌ ನಗರದ ತಮ್ಮ ನಿವಾಸಕ್ಕೆ ಭೇಟಿ ನೀಡುವುದು ಸೇರಿದಂತೆ ತಮ್ಮ ವಿರುದ್ಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ಸುಪ್ರೀಂ ಕೋರ್ಟ್‌ ಕಟ್ಟಪ್ಪಣೆ ವಿಧಿಸಿದೆ.

ಹುಸೇನ್ ಅವರಿಗೆ ಜನವರಿ 29ರಿಂದ ಫೆಬ್ರುವರಿ 3ರವರೆಗೆ ಸುಪ್ರೀಂ ಕೋರ್ಟ್ ಕಸ್ಟಡಿ ಪೆರೋಲ್ ನೀಡಿದ್ದು, ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಪ್ರತಿದಿನ 12 ಗಂಟೆಗಳ ಕಾಲ ಪೊಲೀಸರ ಮೇಲ್ವಿಚಾರಣೆಯಲ್ಲಿ ಪ್ರಚಾರ ನಡೆಸಲು ಅವಕಾಶ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠವು ಪೊಲೀಸ್ ಬೆಂಗಾವಲು ಸೇರಿದಂತೆ ಭದ್ರತಾ ವೆಚ್ಚಗಳನ್ನು ಭರಿಸಲು ಹುಸೇನ್ ಅವರು ದಿನಕ್ಕೆ ₹2.47 ಲಕ್ಷ ಠೇವಣಿ ಇಡಬೇಕು ಎಂದು ತೀರ್ಪು ನೀಡಿದೆ.

ಮುಸ್ತಫಾಬಾದ್‌ ಕ್ಷೇತ್ರದಲ್ಲಿ 1,55,706 ಪುರುಷ ಮತದಾರರು, 1,33,193 ಮಹಿಳಾ ಮತದಾರರು ಮತ್ತು ಮೂವರು ತೃತೀಯಲಿಂಗಿ ಮತದಾರರು ಸೇರಿದಂತೆ 2,88,902 ನೋಂದಾಯಿತ ಮತದಾರರಿದ್ದಾರೆ.

ಮುಸ್ತಫಾಬಾದ್ ಕ್ಷೇತ್ರದಿಂದ ಎಎಪಿ, ಆದಿಲ್ ಅಹ್ಮದ್ ಖಾನ್ ಅವರಿಗೆ ಟಿಕೆಟ್‌ ನೀಡಿದೆ. ಇತ್ತ ಬಿಜೆಪಿ ಹಾಲಿ ಶಾಸಕರಾದ ಮೋಹನ್ ಸಿಂಗ್ ಬಿಶ್ತ್ ಅವರನ್ನು ಕಣಕ್ಕಿಳಿಸಿದೆ.

70 ಸದಸ್ಯ ಬಲದ ದೆಹಲಿಯಲ್ಲಿ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.