ADVERTISEMENT

ಪ್ರವಾಹ ಪೀಡಿತ ಜನರಿಗೆ ಪರಿಹಾರ ವಿಳಂಬ: ದೆಹಲಿ ಸರ್ಕಾರದ ವಿರುದ್ಧ ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 11:36 IST
Last Updated 5 ಸೆಪ್ಟೆಂಬರ್ 2025, 11:36 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಸರಿಯಾದ ಸಮಯಕ್ಕೆ ಪರಿಹಾರ ಸಾಮಗ್ರಿಗಳನ್ನು ಒದಗಿಸುತ್ತಿಲ್ಲ ಎಂದು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ದೆಹಲಿಯ ಶಾಸ್ತ್ರಿ ಪಾರ್ಕ್‌ನಲ್ಲಿರುವ ಪರಿಹಾರ ಶಿಬಿರಕ್ಕೆ ಕೇಜ್ರಿವಾಲ್‌ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ಅಫ್ಗಾನಿಸ್ತಾನಕ್ಕೆ ಭಾರತ ಸಹಾಯದ ಹಸ್ತ ಚಾಚಿದೆ. ಪರಿಹಾರ ಸಮಗ್ರಿಗಳನ್ನು ಕಳುಹಿಸಿದೆ. ಆದರೆ, ದೆಹಲಿ ಜನರಿಗೆ ಸರಿಯಾದ ಸಮಯಕ್ಕೆ ಪರಿಹಾರ ಸಾಮಗ್ರಿಗಳು ಲಭಿಸುತ್ತಿಲ್ಲ ಎಂದು ಕೇಜ್ರಿವಾಲ್‌ ಆರೋಪಿಸಿದ್ದಾರೆ.

ADVERTISEMENT

ಬೇರೆ ದೇಶಗಳಿಗೆ ಸಹಾಯ ಮಾಡುವುದು ಉತ್ತಮವಾದ ವಿಷಯವೇ. ಆದರೆ ಕೇಂದ್ರ ಸರ್ಕಾರ ದೆಹಲಿಗೆ ಪರಿಹಾರ ಕಾರ್ಯವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ. ಪರಿಹಾರ ಶಿಬಿರಗಳಲ್ಲಿ ಆಹಾರ ವಿತರಿಸುವುದರಲ್ಲಿ ಹಾಗೂ ಶಿಬಿರಗಳನ್ನು ಸ್ಥಾಪಿಸುವುದರಲ್ಲಿಯೂ ವಿಳಂಬವಾಗಿದೆ. ಈ ಕ್ರಮ ಸರಿಯಲ್ಲ. ಸರಿಯಾದ ಸಮಯಕ್ಕೆ ಸಂತ್ರಸ್ತರಿಗೆ ನೆರವು ಒದಗಿಸಿ, ಪ್ರವಾಹ ಪೀಡಿತ ಉತ್ತರ ಭಾರತದ ರಾಜ್ಯಗಳಿಗೆ ತ್ವರಿತವಾಗಿ ಪರಿಹಾರ ಘೋಷಿಸಿ ಎಂದು ಕೇಂದ್ರ ಸರ್ಕಾರವನ್ನು ಕೇಜ್ರಿವಾಲ್‌ ಒತ್ತಾಯಿಸಿದ್ದಾರೆ.

ಪರಿಹಾರ ಶಿಬಿರಗಳಲ್ಲಿ ಜನರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನೋಡಿದ್ದೇನೆ. ಅವರಿಗೆ ಸಮಯಕ್ಕೆ ಸರಿಯಾಗಿ ಆಹಾರ ಸಿಗುತ್ತಿಲ್ಲ. ಎಲ್ಲೆಡೆ ಸೊಳ್ಳೆಗಳಿವೆ. ಮಳೆ ಬರುತ್ತಿದೆ. ಆದರೆ ನಿನ್ನೆಯಷ್ಟೇ ಶಿಬಿರಗಳನ್ನು ನಿರ್ಮಿಸಿಲಾಯಿತು. ಜನರ ಸಮಸ್ಯೆಗಳಿಗೆ ಅವಶ್ಯವಾಗಿ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಎಎಪಿ ಆಡಳಿತವಿರುವ ಪಂಜಾಬ್‌ಗೆ ಕೇಜ್ರಿವಾಲ್‌ ಗುರುವಾರ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು.

ಎಎಪಿ ಆಡಳಿತವಿರುವ ಪಂಜಾಬ್‌ಗೆ ಕೇಜ್ರಿವಾಲ್‌ ಗುರುವಾರ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.