
ದೆಹಲಿ ವಾಯುಮಾಲಿನ್ಯ
ಕೃಪೆ: ಪಿಟಿಐ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ದೆಹಲಿ ಸರ್ಕಾರ ಮುಂದಾಗಿದೆ.
ಬಿಎಸ್–4 ಮಾನದಂಡಗಳನ್ನು ಪಾಲಿಸದ ಖಾಸಗಿ ವಾಹನಗಳಿಗೆ ದೆಹಲಿ ಪ್ರವೇಶ ನಿರ್ಬಂಧಿಸಿದ್ದು, ಮಾಲಿನ್ಯ ಹೊರ ಸೂಸುವಿಕೆ ನಿಯಂತ್ರಣ ಮಟ್ಟದಲ್ಲಿ ಇಲ್ಲದ ವಾಹನಗಳಿಗೆ ಇಂಧನವನ್ನೇ ಪೂರೈಸದಂತೆ 'ನೋ ಪಿಯುಸಿ, ನೋ ಫ್ಯುಯಲ್' ನೀತಿಯನ್ನೂ ಇಂದಿನಿಂದ (ಗುರುವಾರದಿಂದ) ಜಾರಿಗೊಳಿಸಿದೆ.
'ಮಾಲಿನ್ಯ ನಿಯಂತ್ರಣದಲ್ಲಿದೆ' (ಪಿಯುಸಿ) ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ತೈಲ ಪೂರೈಸುವಂತಿಲ್ಲ. ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡಿಂಗ್ ಕ್ಯಾಮೆರಾಗಳು, ಪೆಟ್ರೋಲ್ ಬಂಕ್‌ಗಳಲ್ಲಿ ಅಳವಡಿಸಿರುವ ಸೈರನ್‌ಗಳು ಮತ್ತು ಪೊಲೀಸರ ನೆರವಿನೊಂದಿಗೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.
ಗಡಿ ಪ್ರದೇಶಗಳೂ ಸೇರಿದಂತೆ ದೆಹಲಿಯಾದ್ಯಂತ 126 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, 580 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಾಗೆಯೇ, ಪೆಟ್ರೋಲ್ ಪಂಪ್‌ಗಳು ಮತ್ತು ಗಡಿ ಪ್ರದೇಶದಲ್ಲಿ ಸಾರಿಗೆ ಇಲಾಖೆಯ ತಂಡಗಳನ್ನೂ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್–4 ಮಾನದಂಡಕ್ಕೊಳಪಡದ ವಾಹನಗಳಿಗೆ ವಿಧಿಸಲಾಗಿರುವ ಪ್ರವೇಶ ನಿರ್ಬಂಧವು, ಸಿಎನ್‌ಜಿ ಹಾಗೂ ವಿದ್ಯುತ್‌ಚಾಲಿತ ವಾಹನಗಳಿಗೆ, ಸಾರ್ವಜನಿಕ ಸಾರಿಗೆ ಮತ್ತು ತುರ್ತು ಸೇವೆಗಳ ವಾಹನಗಳಿಗೆ ಅನ್ವಯವಾಗುವುದಿಲ್ಲ ಎಂದೂ ಹೇಳಿದ್ದಾರೆ.
GRAP–4 (ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾಯೋಜನೆ) ನಿರ್ಬಂಧಗಳ ಅಡಿಯಲ್ಲಿ ಬರುವ, ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ವಾಹನಗಳಿಗೂ ನಗರ ಪ್ರವೇಶಕ್ಕೆ ಅನುಮತಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.