ADVERTISEMENT

ಹೋಳಿ ಆಚರಣೆ ವೇಳೆ ಗಲಾಟೆ: ದೆಹಲಿ ವ್ಯಕ್ತಿಯೊಬ್ಬರ ಕೊಲೆ, ಸೋದರನಿಗೆ ಗಾಯ

ಪಿಟಿಐ
Published 20 ಮಾರ್ಚ್ 2022, 2:00 IST
Last Updated 20 ಮಾರ್ಚ್ 2022, 2:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಜೋರಾಗಿ ಮ್ಯೂಸಿಕ್ ಹಾಕಿರುವ ವಿಚಾರವಾಗಿ ಉಂಟಾದ ವಿವಾದದಲ್ಲಿ ದೆಹಲಿಯ 22 ವರ್ಷದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೆರೆಹೊರೆಯವರು ನಡೆಸಿದ ದಾಳಿಯಲ್ಲಿ ಆತನ ಸೋದರನಿಗೂ ಕೂಡ ಗಾಯಗಳಾಗಿವೆ. ಇವರಿಬ್ಬರು ಹೋಳಿ ಆಚರಣೆಗೆಂದು ತಮ್ಮ ಸೋದರಿಯ ಮನೆಗೆ ಬಂದಿದ್ದರು.

ಪಶ್ಚಿಮ ಪಂಜಾಬಿ ಬಾಗ್‌ನ ಮನೋಹರ ಪಾರ್ಕ್ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ 2.42ರ ಸುಮಾರಿಗೆ ಘಟನೆ ನಡೆದಿರುವುದಾಗಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ADVERTISEMENT

ಸಂತ್ರಸ್ತರಾದ ಮನೋಜ್ ಮತ್ತು ಅವರ ಸೋದರ ಲಕ್ಷ್ಮಿ ಪ್ರಸಾದ್ (20) ಇಬ್ಬರನ್ನು ಆಚಾರ್ಯ ಬಿಕ್ಷು ಆಸ್ಪತ್ರೆಗೆ ದಾಖಲಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮನೋಜ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದು, ಪ್ರಸಾದ್ ತಲೆಗೆ ಹೊಲಿಗೆ ಹಾಕಿದ ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ. ಮನೋಜ್ ಎದೆಗೆ ತಿವಿದಿರುವ ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿ ಮತ್ತು ಸಂತ್ರಸ್ತರ ಸೋದರಿ ಖುಷ್ಬೂರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಸಾದ್ ಮತ್ತು ಮನೋಜ್ ಹೋಳಿ ಆಚರಣೆಗೆಂದು ಬಂದಿದ್ದರು ಎಂದಿದ್ದಾರೆ. ತನಿಖೆ ವೇಳೆ ಜೋರಾಗಿ ಮ್ಯೂಸಿಕ್ ಹಾಕಿದ್ದೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.

ನೆರೆಮನೆಯವರಾದ ಮಿತುನ್ ಸಹ್ನಿ, ರಾಜ್‍‌ಕುಮಾರ್, ಬಿಜೇಂದರ್ ಸಹ್ನಿ, ಗರಿಬನ್ ಕುಮಾರ್, ತಿಲ್ಜು ಸಹ್ನಿ ಮತ್ತು ರವಿಂದರ್ ಸಹ್ನಿ ಮ್ಯೂಸಿಕ್ ವಿಚಾರವಾಗಿ ಪ್ರಸಾದ್ ಮತ್ತು ಮನೋಜ್ ಮೇಲೆ ಜಗಳ ಮಾಡಿದ್ದಾರೆ. ಜಗಳ ಹಿಂಸಾಚಾರಕ್ಕೆ ತಿರುಗಿದೆ. ಗರಿಬನ್, ಮನೋಜ್ ಎದೆಗೆ ಚಾಕುವಿನಿಂದ ತಿವಿದಿದ್ದಾರೆ. ಈ ವೇಳೆ ಪ್ರಸಾದ್ ತಲೆಗೆ ಕಬ್ಬಿಣದ ಪ್ಯಾನ್‌ನಿಂದ ದಾಳಿ ನಡೆಸಿದ್ದಾರೆ. ಸದ್ಯ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಘನಶ್ಯಾಂ ಬನ್ಸಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.