ADVERTISEMENT

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ: ದೆಹಲಿ ಸಿಎಂ ಆತಿಶಿ ವಿರುದ್ಧ ಎಫ್‌ಐಆರ್‌

ಪಿಟಿಐ
Published 4 ಫೆಬ್ರುವರಿ 2025, 6:23 IST
Last Updated 4 ಫೆಬ್ರುವರಿ 2025, 6:23 IST
<div class="paragraphs"><p>ದೆಹಲಿ ಸಿಎಂ ಅತಿಶಿ</p></div>

ದೆಹಲಿ ಸಿಎಂ ಅತಿಶಿ

   

(ಪಿಟಿಐ)

ನವದೆಹಲಿ: ನೀತಿ ಸಂಹಿತೆ ಉಲ್ಲಂಘನೆ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಮತ್ತು ಕಾಲ್ಕಾಜಿ ಕ್ಷೇತ್ರದ ಎಎಪಿ ಅಭ್ಯರ್ಥಿ ಆತಿಶಿ ಅವರ ವಿರುದ್ಧ ದೆಹಲಿ ಪೊಲೀಸರು ಮಂಗಳವಾರ ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಎಎಪಿ ಬೆಂಬಲಿಗರು ಫತೇಹ್‌ ಸಿಂಗ್‌ ಮಾರ್ಗ್‌ನಲ್ಲಿ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಸಂದರ್ಭದಲ್ಲಿ ಬೆಂಬಲಿಗರೊಂದಿಗೆ ಆತಿಶಿ ಅವರು ಇದ್ದರು. ಎಎಪಿಯ ಇಬ್ಬರು ಸದಸ್ಯರು ಪೊಲೀಸ್‌ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ಗೋವಿಂದಪುರಿ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ’ ಎಂದು ಹೇಳಿದರು. 

ಪೊಲೀಸ್ ಆಯೋಗದಿಂದ ಪಕ್ಷಪಾತ ಧೋರಣೆ: ಆತಿಶಿ

ಬಿಜೆಪಿ ನಾಯಕರು ಗೂಂಡಾಗಿರಿ ಮಾಡುತ್ತಾರೆ. ಆದರೆ ಅವರನ್ನು ಚುನಾವಣಾ ಆಯೋಗ ಮತ್ತು ದೆಹಲಿ ಪೊಲೀಸ್‌  ರಕ್ಷಿಸುತ್ತಿವೆ. ಎಎಪಿ ನಾಯಕರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಿ ಪಕ್ಷಪಾತ ಧೋರಣೆ ತೋರುತ್ತಿವೆ ಎಂದು ದೆಹಲಿ ಮುಖ್ಯಮಂತ್ರಿ ಆತಿಶಿ ಮಂಗಳವಾರ ದೂರಿದರು.

ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಆತಿಶಿ ಅವರು ಈ ಹೇಳಿಕೆ ನೀಡಿದರು.

ಕಾಲ್ಕಾಜಿ ಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಭಾರತದಲ್ಲಿ ಪ್ರಜಾಪ್ರಭುತ್ವವು ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರ ಕೈಯಲ್ಲಿದೆ. ಆಯೋಗವು ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸುತ್ತಿದೆಯೇ ಇಲ್ಲವೇ ಎಂದು ದೇಶವು ಗಮನಿಸುತ್ತಿದೆ’ ಎಂದು ಹೇಳಿದರು.

ಬಿಜೆಪಿಯವರು ಬಹಿರಂಗವಾಗಿ ಗೂಂಡಾಗಿರಿ ಮಾಡುತ್ತಿದ್ದಾರೆ. ದೆಹಲಿ ಪೊಲೀಸರು ಕ್ರಮ ಕೈಗೊಳ್ಳುವುದು ಬಿಟ್ಟು ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಚುನಾವಣಾ ಆಯೋಗವು ಅವರ ವಿರುದ್ಧ ದೂರು ನೀಡುವವರ ವಿರುದ್ಧವೇ ಪ್ರಕರಣ ದಾಖಲಿಸುತ್ತಿದೆ ಎಂದು ಆರೋಪಿಸಿದರು.

‘ಕಾಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್‌ ಬಿಧೂಡಿ  ಮತ್ತು ಅವರ ಕುಟುಂಬ ಸದಸ್ಯರು ಬಹಿರಂಗವಾಗಿ ಗೂಂಡಾಗಿರಿ ಮಾಡುತ್ತಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಹೇಳಿದರು.

ಎಎಪಿ ಆರೋಪಕ್ಕೆ ಆಯೋಗ ತಿರುಗೇಟು

ಚುನಾವಣಾ ಆಯೋಗವನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಡೆಸುತ್ತಿದ್ದಾರೆ ಎಂಬ ಎಎಪಿ ಆರೋಪಕ್ಕೆ ಆಯೋಗ ಮಂಗಳವಾರ ತಿರುಗೇಟು ನೀಡಿದೆ. ದೆಹಲಿ ಚುನಾವಣೆಯಲ್ಲಿ ಚುನಾವಣಾ ಪ್ರಾಧಿಕಾರವನ್ನು ಕೆಣಕಲು ಪುನರಾವರ್ತಿತ ಉದ್ದೇಶಪೂರ್ವಕ ಒತ್ತಡ ತಂತ್ರಗಳನ್ನು ಹೇರುತ್ತಿರುವುದು ಮೂವರು ಸದಸ್ಯರ ಆಯೋಗದ ಗಮನಕ್ಕೆ ಬಂದಿದೆ ಎಂದು ಹೇಳಿದೆ. ಚುನಾವಣಾ ಆಯೋಗವು ಏಕ ವ್ಯಕ್ತಿಯ ಸಂಸ್ಥೆ ಎಂದು ಬಿಂಬಿಸಲಾಗುತ್ತಿದೆ ಎಂದು ಅದು ಹೇಳಿದೆ.

‘ಆಯೋಗವು ಸಾಂವಿಧಾನಿಕ ಸಂಯಮವನ್ನು ಹೊಂದಲು ಮತ್ತು  ಪ್ರಕೋಪಗಳನ್ನು ಚಾಣಾಕ್ಷತನದಿಂದ ನಿಷ್ಠುರವಾಗಿ ನಿರ್ವಹಿಸಲು ನಿರ್ಧರಿಸಿದೆ. ಯಾವುದೇ ಪ್ರಚೋದನೆಗಳಿಂದ ಪ್ರಭಾವಿತವಾಗುವುದಿಲ್ಲ’ ಎಂದು ‘ಎಕ್ಸ್‌’ನಲ್ಲಿ ತಿಳಿಸಿದೆ.

ಬಿಜೆಪಿಯ ನೀತಿ ಸಂಹಿತೆ ಉಲ್ಲಂಘನೆಯನ್ನು ಆಯೋಗವು ನಿರ್ಲಕ್ಷಿಸುತ್ತಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಆರೋಪಿಸಿದ್ದರು. ನಿವೃತ್ತಿಯ ನಂತರದ ಹುದ್ದೆಯನ್ನು ಪಡೆಯಲು ಕುಮಾರ್ ಅವರು ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಜ್ರಿವಾಲ್ ದೂರಿದ್ದರು. 

ಆತಿಶಿಗೆ ಹೈಕೋರ್ಟ್‌ ನೋಟಿಸ್‌

ಎಎಪಿ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದೆ ಎಂಬ ಆತಿಶಿ ಅವರ ಆರೋಪಕ್ಕೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯನ್ನು ರದ್ದು ಮಾಡಿದ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಿಜೆಪಿ ನಾಯಕರೊಬ್ಬರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಆತಿಶಿ ಅವರಿಗೆ ದೆಹಲಿ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ. 

ಅತಿಶಿ ಅವರು 2024ರ ಜನವರಿ 27 ಮತ್ತು ಏಪ್ರಿಲ್‌ 2ರಂದು ಎಎಪಿ ಸರ್ಕಾರವನ್ನು ಉರುಳಿಸಲು ಹಾಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಲಾ ₹25 ಕೋಟಿ ಮತ್ತು ಟಿಕೆಟ್‌ ನೀಡುವ ಆಮಿಷವನ್ನು ಎಎಪಿಯ ಏಳು ಶಾಸಕರಿಗೆ ಬಿಜೆಪಿ ಒಡ್ಡಿದೆ  ಆರೋಪಿಸಿದ್ದರು. ಬಿಜೆಪಿ ಮುಖಂಡ ಪ್ರವೀಣ ಶಂಕರ್ ಕಪೂರ್‌ ಅವರು ಆತಿಶಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಸೋಲುವ ಭೀತಿಯಿಂದ ಆತಿಶಿ ಅವರು ಆತಂಕಗೊಂಡಿದ್ದಾರೆ. ತಾವು ಹೊಂದಿರುವ ಸಾಂವಿಧಾನಿಕ ಹುದ್ದೆಯ ಘನತೆಯನ್ನು ಕುಗ್ಗಿಸಬೇಡಿ ಎಂದು ಅವರಿಗೆ ಸಲಹೆ ನೀಡುತ್ತೇನೆ.
–ರಮೇಶ್‌ ಬಿಧೂಡಿ, ಕಾಲ್ಕಾಜಿ ಕ್ಷೇತ್ರದ ಬಿಜೆ‍ಪಿ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.