ADVERTISEMENT

‘ಪ್ರಯಾಗರಾಜ್’ ಹೆಸರಿನ ರೈಲುಗಳ ಗೊಂದಲದಿಂದಲೇ ಕಾಲ್ತುಳಿತ ಸಂಭವಿಸಿದೆ: ಪೊಲೀಸರು

ಪಿಟಿಐ
Published 16 ಫೆಬ್ರುವರಿ 2025, 10:22 IST
Last Updated 16 ಫೆಬ್ರುವರಿ 2025, 10:22 IST
<div class="paragraphs"><p>ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸೇರಿದ್ದ ಜನಸಮೂಹ</p></div>

ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸೇರಿದ್ದ ಜನಸಮೂಹ

   

–ಪಿಟಿಐ ಚಿತ್ರ

ನವದೆಹಲಿ: ನವದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದ ವೇಳೆ 18 ಜನ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ADVERTISEMENT

‘ಪಾದಚಾರಿ ಮೇಲ್ಸೇತುವೆಯಿಂದ ಇಳಿಯುವಾಗ ಕೆಲ ಪ್ರಯಾಣಿಕರು ಜಾರಿ ಬಿದ್ದಿದ್ದೇ ಕಾಲ್ತುಳಿತಕ್ಕೆ ಕಾರಣ’ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗರಾಜ್‌ಗೆ ತೆರಳುತ್ತಿದ್ದ ಜನರು ಭಾರಿ ಸಂಖ್ಯೆಯಲ್ಲಿ ಸೇರಿದ್ದ ಕಾರಣ, ರೈಲು ನಿಲ್ದಾಣದಲ್ಲಿ ದಟ್ಟಣೆ ಇತ್ತು.

ಆದರೆ, ಪ್ರಯಾಗರಾಜ್‌ಗೆ ಸಂಚರಿಸುವ ರೈಲುಗಳ ಹೆಸರು ಕುರಿತು ಪ್ರಯಾಣಿಕರಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ.

‘ಪ್ರಯಾಗರಾಜ್‌ ಎಕ್ಸ್‌ಪ್ರೆಸ್‌’ ಹಾಗೂ ‘ಪ್ರಯಾಗರಾಜ್‌ ಸ್ಪೆಷಲ್’ ರೈಲುಗಳು ಪ್ಲಾಟ್‌ಫಾರ್ಮ್‌ನಲ್ಲಿ ಇದ್ದವು. ಎರಡೂ ರೈಲುಗಳ ಹೆಸರಿನಲ್ಲಿ ಪ್ರಯಾಗರಾಜ್ ಹೆಸರು ಇದ್ದ ಕಾರಣ ಪ್ರಯಾಣಿಕರಲ್ಲಿ ಗೊಂದಲ ಉಂಟಾಯಿತು’ ಎಂದು ಮೂಲಗಳು ಹೇಳಿವೆ.

‘ಪ್ರಯಾಗರಾಜ್‌ ಎಕ್ಸ್‌ಪ್ರೆಸ್‌’ ರೈಲು ಪ್ಲಾಟ್‌ಫಾರ್ಮ್‌ 14ರಲ್ಲಿತ್ತು. ಮತ್ತೊಂದೆಡೆ, ಪ್ಲಾಟ್‌ಫಾರ್ಮ್ 16ಕ್ಕೆ ‘ಪ್ರಯಾಗರಾಜ್‌ ಸ್ಪೆಷಲ್‌’ ರೈಲು ಬರುವ ಕುರಿತು ನಿಲ್ದಾಣದ ಸಿಬ್ಬಂದಿ ಘೋಷಿಸಿದ್ದಾರೆ. ಪ್ಲಾಟ್‌ಫಾರ್ಮ್‌ 14 ತಲುಪುತ್ತಿದ್ದ ಜನರು, ತಾವು ಪ್ರಯಾಣಿಸುವ ರೈಲು ಪ್ಲಾಟ್‌ಫಾರ್ಮ್ 16ಕ್ಕೆ ಬರಲಿದೆ ಎಂದು ಭಾವಿಸಿದರು. ತಾವು ಪ್ರಯಾಣಿಸಬೇಕಿದ್ದ ರೈಲು ತಪ್ಪುತ್ತದೆ ಎಂಬ ಆತಂಕವೂ ಅವರಲ್ಲಿ ಮೂಡಿತು. ಆಗ, ಜನರು 16ನೇ ಪ್ಲಾಟ್‌ಫಾರ್ಮ್‌ನತ್ತ ಓಡಲು ಶುರು ಮಾಡಿದಾಗ ಕಾಲ್ತುಳಿತ ಉಂಟಾಯಿತು’ ಎಂದೂ ಮೂಲಗಳು ಹೇಳಿವೆ.

‘ರೈಲುಗಳ ಹೆಸರು ಕುರಿತು ಉಂಟಾದ ಗೊಂದಲವೇ ಈ ದುರಂತಕ್ಕೆ ಕಾರಣ’ ಎಂದು ಪ್ರತ್ಯಕ್ಷದರ್ಶಿಯೊಬ್ಬರೂ ಹೇಳಿದ್ದಾರೆ.

ಮತ್ತೊಂದೆಡೆ, ‘ಪ್ರಯಾಗರಾಜ್‌ಗೆ ಇತರ ನಾಲ್ಕು ರೈಲುಗಳು ಸಂಚರಿಸಲಿದ್ದವು. ಈ ಪೈಕಿ, ಮೂರು ರೈಲುಗಳು ನಿಲ್ದಾಣಕ್ಕೆ ಬರುವುದು ತಡವಾಗಿತ್ತು. ಹೀಗಾಗಿ, ನಿಲ್ದಾಣದಲ್ಲಿ ಅನಿರೀಕ್ಷಿತ ಜನದಟ್ಟಣೆ ಕಂಡುಬಂತು’ ಎಂದು ಪೊಲೀಸರು ಹೇಳಿದ್ದಾರೆ.

ಅವಘಡ ಕುರಿತಂತೆ, ಉತ್ತರ ರೈಲ್ವೆ ಅಧಿಕಾರಿಗಳು ಹೇಳುವುದೇ ಬೇರೆ.

‘ಪಟ್ನಾಕ್ಕೆ ಸಂಚರಿಸುವ ಮಗಧ ಎಕ್ಸ್‌ಪ್ರೆಸ್‌ ಪ್ಲಾಟ್‌ಫಾರ್ಮ್‌ 14ರಲ್ಲಿ ನಿಂತಿತ್ತು. ನವದೆಹಲಿ–ಜಮ್ಮು ಉತ್ತರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ಪ್ಲಾಟ್‌ಫಾರ್ಮ್ 15ರಲ್ಲಿತ್ತು’ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ (ಸಿಪಿಆರ್‌ಒ) ಹಿಮಾಂಶು ಉಪಾಧ್ಯಾಯ ಹೇಳಿದ್ದಾರೆ.

‘ಪಾದಚಾರಿ ಮೇಲ್ಸೇತುವೆ ಮೂಲಕ ಸಾಗುತ್ತಿದ್ದವರ ಪೈಕಿ ಬಹಳಷ್ಟು ಜನರು ಪ್ಲಾಟ್‌ಫಾರ್ಮ್‌ 14 ಮತ್ತು 15ರತ್ತ ಇಳಿಯುತ್ತಿದ್ದರು. ಈ ವೇಳೆ, ಕಾಲು ಜಾರಿದ್ದರಿಂದ ಇತರರ ಮೇಲೆ ಕೆಲವರು ಬಿದ್ದಾಗ, ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತು’ ಎಂದು ಸಿಪಿಆರ್‌ಒ ಉಪಾಧ್ಯಾಯ ಹೇಳಿದ್ದಾರೆ.

1,500 ಟಿಕೆಟ್‌ ಮಾರಾಟ: ನಿಲ್ದಾಣದಿಂದ ಕೆಲವು ರೈಲುಗಳು ತಡವಾಗಿ ಹೊರಟವು. ಜೊತೆಗೆ, ಪ್ರತಿ ಗಂಟೆಗೆ 1,500 ಜನರಲ್‌ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ನಿಲ್ದಾಣದಲ್ಲಿ ಗೊಂದಲದ ಸನ್ನಿವೇಶ ಸೃಷ್ಟಿಗೆ ಇದು ಕಾರಣವಾಯಿತು ಎಂದು ಇತರ ಮೂಲಗಳು ಹೇಳುತ್ತವೆ.

ಪರಿಹಾರ: ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 10 ಲಕ್ಷ, ಗಂಭೀರ ಗಾಯಗೊಂಡವರಿಗೆ ತಲಾ ₹2.5 ಲಕ್ಷ, ಸಣ್ಣಪುಟ್ಟ ಗಾಯಗಳಾದವರಿಗೆ ₹1 ಲಕ್ಷ ಪರಿಹಾರ ನೀಡುವುದಾಗಿ ರೈಲ್ವೆ ಇಲಾಖೆಯು ಘೋಷಿಸಿದೆ.

ಹಸ್ತಾಂತರ: ಮೃತದೇಹಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಲೋಕನಾಯಕ ಜಯಪ್ರಕಾಶ್‌ ನಾರಾಯಣ ಆಸ್ಪತ್ರೆ ಮೂಲಗಳು ಹೇಳಿವೆ.

ಬಹುತೇಕ ಕುಟುಂಬಗಳು ತಮ್ಮವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಇಲ್ಲದೆಯೇ ತೆಗೆದುಕೊಂಡಿವೆ ಎಂದೂ ಮೂಲಗಳು ಹೇಳಿವೆ. ಇದನ್ನು ಅಧಿಕಾರಿಗಳು ದೃಢಪಡಿಸಿಲ್ಲ.

ತನಿಖೆಗೆ ಸಮಿತಿ ರಚನೆ

ಕಾಲ್ತುಳಿತ ಕುರಿತು ತನಿಖೆ ನಡೆಸುವುದಕ್ಕಾಗಿ ಇಬ್ಬರು ಉನ್ನತ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿದ್ದಾಗಿ ರೈಲ್ವೆ ಇಲಾಖೆ ತಿಳಿಸಿದೆ. ಉತ್ತರ ರೈಲ್ವೆಯ ಪ್ರಧಾನ ಮುಖ್ಯ ಕಮರ್ಷಿಯಲ್ ಮ್ಯಾನೇಜರ್ ನರಸಿಂಗ ದೇವ್ ಹಾಗೂ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಪಂಕಜ್ ಗಂಗ್ವಾರ್‌ ಈ ಸಮಿತಿ ಸದಸ್ಯರು ಎಂದು ಇಲಾಖೆ ತಿಳಿಸಿದೆ. ತನಿಖೆ ಆರಂಭಿಸಿರುವ ಸಮಿತಿಯು ನವದೆಹಲಿ ರೈಲು ನಿಲ್ದಾಣಕ್ಕೆ ಸಂಬಂಧಿಸಿದ ಎಲ್ಲ ವಿಡಿಯೊ ದೃಶ್ಯಾವಳಿಗಳನ್ನು ಭದ್ರವಾಗಿ ಕಾದಿಡುವಂತೆ ಆದೇಶಿಸಿದೆ.

* ಭಾನುವಾರವೂ ನವದೆಹಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿರಲಿಲ್ಲ

* ಕಾಲ್ತುಳಿತ ಸಂಭವಿಸಿದ್ದ ಪ್ಲಾಟ್‌ಫಾರ್ಮ್‌ಗಳಲ್ಲಿ ಶೂಗಳು ಹರಿದ ಬ್ಯಾಗು– ಬಟ್ಟೆಗಳ ರಾಶಿ ಅರ್ಧಂಬರ್ಧ ತಿಂದಿದ್ದ ಆಹಾರ ಪದಾರ್ಥಗಳು ಭಾರಿ ಪ್ರಮಾಣದಲ್ಲಿ ಬಿದ್ದಿದ್ದವು. ಇವುಗಳ ತೆರವಿಗಾಗಿ ರೈಲ್ವೆ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ಕೈಗೊಂಡಿದ್ದರು

* ತಮ್ಮವರ ಶವಗಳನ್ನು ಗುರುತಿಸಲು ಲೋಕನಾಯಕ ಜಯಪ್ರಕಾಶ್‌ ನಾರಾಯಣ ಆಸ್ಪತ್ರೆಯಲ್ಲಿ ಮೃತರ ಕುಟುಂಬಗಳ ಸದಸ್ಯರು ಜಮಾಯಿಸಿದ್ದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.