ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಹಿನ್ನಡೆಯಾಗಿದೆ ಎಂದು ದೆಹಲಿಯ ಮುಖ್ಯಮಂತ್ರಿ ಆತಿಶಿ ಒಪ್ಪಿಕೊಂಡಿದ್ದಾರೆ.
ಅದೇ ವೇಳೆ ಬಿಜೆಪಿಯ ಸರ್ವಾಧಿಕಾರ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು (ಶನಿವಾರ) ಹೊರಬೀಳುತ್ತಿದ್ದು, ಚುನಾವಣಾ ಆಯೋಗದ ಈಗಿನ ಟ್ರೆಂಡ್ (ಸಂಜೆ 3.30) ಪ್ರಕಾರ ಬಿಜೆಪಿ 48 ಹಾಗೂ ಎಎಪಿ 22 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಇದರೊಂದಿಗೆ 26 ವರ್ಷಗಳ ಬಳಿಕ ಬಿಜೆಪಿ ಸರ್ಕಾರ ರಚಿಸುವುದು ಬಹುತೇಕ ಖಚಿತಗೊಂಡಿದೆ. ಮತ್ತೊಂದೆಡೆ ಆಡಳಿತರೂಢ ಎಎಪಿ ಮುಖಭಂಗಕ್ಕೊಳಗಾಗಿದೆ.
'ಮೊದಲನೆಯದಾಗಿ ದೆಹಲಿಯ ಜನತೆ ಮತ್ತು ದೃಢವಾಗಿ ನಿಂತ ನಮ್ಮ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆಗಳು. ನಾವು ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ. ಬಿಜೆಪಿಯ ಸರ್ವಾಧಿಕಾರ ಮತ್ತು ಗೂಂಡಾಗಿರಿಯ ವಿರುದ್ಧದ ಹೋರಾಟ ಮುಂದುವರಿಯಲಿದೆ. ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಆದರೆ ದೆಹಲಿ ಮತ್ತು ದೇಶದ ಜನತೆಗಾಗಿ ಹೋರಾಟ ಮುಂದುವರಿಯಲಿದೆ' ಎಂದು ಅವರು ಹೇಳಿದ್ದಾರೆ.
'ನನ್ನನ್ನು ನಂಬಿದ ಮತದಾರರಿಗೆ ಧನ್ಯವಾದಗಳು. ಎಲ್ಲ ಸವಾಲುಗಳನ್ನು ಎದುರಿಸಿ ಜನರಿಗೆ ನಮ್ಮ ಸಂದೇಶ ತಲುಪಿಸಿದ ನಮ್ಮ ತಂಡಕ್ಕೂ ಅಭಿನಂದನೆಗಳು. ನನ್ನ ಸ್ಥಾನವನ್ನು ಗೆದ್ದಿದ್ದೇನೆ. ಆದರೆ ಇದು ಸಂಭ್ರಮಾಚರಣೆಯ ಸಮಯವಲ್ಲ. ಇದು ಹೋರಾಟದ ಸಮಯ. ಬಿಜೆಪಿಯ ಸರ್ವಾಧಿಕಾರದ ವಿರುದ್ದ ಹೋರಾಟ ಮುಂದುವರಿಯಲಿದೆ' ಎಂದು ಅವರು ಪುನರುಚ್ಚರಿಸಿದ್ದಾರೆ.
'ಎಎಪಿ ಯಾವತ್ತೂ ಅನ್ಯಾಯದ ವಿರುದ್ಧ ಹೋರಾಡಿದೆ. ಈಗ ಒಂದು ಹೆಜ್ಜೆ ಹಿನ್ನಡೆಯಾಗಿರಬಹುದು. ಆದರೆ ಎಎಪಿಯ ಹೋರಾಟ ಮುಂದುವರಿಯಲಿದೆ' ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.