ನವದೆಹಲಿ: ದೇಶದ ಕುತೂಹಲ ಕೆರಳಿಸಿರುವ ದೆಹಲಿಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. 70 ಸದಸ್ಯ ಬಲದ ದೆಹಲಿ ವಿಧಾನ ಸಭೆಗೆ ಫೆ.5ರಂದು ನಡೆದ ಚುನಾವಣೆಯಲ್ಲಿ ಶೇ 60.54 ರಷ್ಟು ಮತದಾನವಾಗಿತ್ತು. ಇಂದು (ಶನಿವಾರ) ಬೆಳಿಗ್ಗೆ 8 ಗಂಟೆಯಿಂದ ರಾಷ್ಟ್ರ ರಾಜಧಾನಿಯಾದ್ಯಂತ 19 ಕೇಂದ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದೆ.
'ಮತ ಎಣಿಕೆ ಮೇಲ್ವಿಚಾರಕರು, ಸಹಾಯಕರು, ಸೂಕ್ಷ್ಮ ವೀಕ್ಷಕರು ಮತ್ತು ತರಬೇತಿ ಪಡೆದ ಸಹಾಯಕ ಸಿಬ್ಬಂದಿ ಸೇರಿದಂತೆ 5,000 ಸಿಬ್ಬಂದಿಯನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ' ಎಂದು ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ಅಲಿಸ್ ವಾಜ್ ತಿಳಿಸಿದ್ದಾರೆ.
ಚುನಾವಣಾ ನಿಯಮಗಳ ಪ್ರಕಾರ, ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. 30 ನಿಮಿಷಗಳ ಬಳಿಕ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (ಇವಿಎಂ) ದಾಖಲಾದ ಮತಗಳ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
1.55 ಕೋಟಿ ಅರ್ಹ ಮತದಾರರನ್ನು ಹೊಂದಿರುವ ದೆಹಲಿ ವಿಧಾನ ಸಭೆಗೆ ಫೆ.5ರಂದು ನಡೆದ ಚುನಾವಣೆಯಲ್ಲಿ ಶೇ 60.54 ರಷ್ಟು ಮತದಾನವಾಗಿತ್ತು.
ಮತ ಎಣಿಕೆ ಕೇಂದ್ರಗಳ ಬಳಿ ಅರೆಸೇನಾ ಪಡೆಗಳು ಮತ್ತು ದೆಹಲಿ ಪೊಲೀಸರು ಸೇರಿದಂತೆ ಮೂರು ಹಂತದ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.