ADVERTISEMENT

ದೆಹಲಿ ವಿಧಾನಸಭಾ ಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನ

ಪಿಟಿಐ
Published 3 ಫೆಬ್ರುವರಿ 2025, 5:07 IST
Last Updated 3 ಫೆಬ್ರುವರಿ 2025, 5:07 IST
<div class="paragraphs"><p>ದೆಹಲಿ ಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನ</p></div>

ದೆಹಲಿ ಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನ

   

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೆರಡೇ ದಿನ ಬಾಕಿ ಇದ್ದು, ಬಹಿರಂಗ ಪ್ರಚಾರಕ್ಕೆ ಇಂದು (ಸೋಮವಾರ) ಸಂಜೆ 5 ಗಂಟೆಗೆ ತೆರೆ ಬೀಳಲಿದೆ.

ಕೊನೆಯ ದಿನದ ಪ್ರಚಾರದಲ್ಲಿ ಇಂದು ಬಿಜೆಪಿ ದೆಹಲಿಯಾದ್ಯಂತ 22 ರೋಡ್‌ ಶೋಗಳು ಮತ್ತು ರ್‍ಯಾಲಿಗಳನ್ನು ಹಮ್ಮಿಕೊಂಡಿದೆ. 25 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಕೇಸರಿ ಪಾಳಯವಿದೆ.

ADVERTISEMENT

ಇನ್ನೊಂದೆಡೆ, ಉಚಿತ ಕಲ್ಯಾಣ ಯೋಜನೆಗಳ ಮೇಲೆ ಆಡಳಿತ ನಡೆಸಿಕೊಂಡು ಬಂದ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಭರವಸೆಯಲ್ಲಿದೆ.

ಇತ್ತ, 2013ರವರೆಗೆ 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್‌, ಕಳೆದುಕೊಂಡಲ್ಲೇ ಮತ್ತೆ ನೆಲೆ ಕಂಡುಕೊಳ್ಳುವ ಹುಮ್ಮಸ್ಸಿನಲ್ಲಿದೆ.

ಮೂರು ಪಕ್ಷಗಳು ಗೆಲುವಿಗಾಗಿ ಸೆಣೆಸಾಟ ನಡೆಸುತ್ತಿದ್ದು, ಆಕರ್ಷಕ ಭರವಸೆಗಳು, ಘೋಷಣೆಗಳು, ಪರಸ್ಪರ ಮಾತಿನ ಏಟು– ಎದುರೇಟುಗಳು, ಪ್ರಚಾರ ಗೀತೆಗಳಿಂದ ದೆಹಲಿ ಚುನಾವಣಾ ಅಖಾಡ ರಂಗೇರಿದೆ.

ಎಎಪಿ ಪಕ್ಷ ಬಿಜೆಪಿಯು ‘ಭಾರತೀಯ ಸುಳ್ಳಿನ ಪಕ್ಷ’ (ಭಾರತೀಯ ಜೂಟಾ ಪಾರ್ಟಿ), ‘ನಿಂದನೆ ಮಾಡುವ ಪಕ್ಷ ’(ಗಲಿ ಗಲೌಚ್ ಪಾರ್ಟಿ) ಎಂದು ವಾಗ್ದಾಳಿ ನಡೆಸಿತ್ತು. ಇದಕ್ಕೆ ಪ್ರತಿ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಎಎಪಿಯನ್ನು ‘ಆಪ್‌–ಡಾ’ ಮತ್ತು ಅದರ ನಾಯಕ ಅರವಿಂದ್ ಕೇಜ್ರಿವಾಲ್‌ ‘ಘೋಷ್ಣಾ ಮಂತ್ರಿ’ ಎಂದು ಜರಿದಿದ್ದಾರೆ.

ಕಾಂಗ್ರೆಸ್‌ ಪಕ್ಷವು, ಕೇಜ್ರಿವಾಲ್ ಅವರನ್ನು ‘ಫರ್ಜಿವಾಲ್’ (ನಕಲಿ) ಮತ್ತು ಮೋದಿಯವರ ‘ಛೋಟಾ ರೀಚಾರ್ಜ್’ (ಸಣ್ಣ ರೀಚಾರ್ಜ್) ಎಂದು ವ್ಯಂಗ್ಯ ಮಾಡಿದೆ.

ಫೆ.5 ರಂದು ನಡೆಯಲಿರುವ ಚುನಾವಣೆಯಲ್ಲಿ ದೆಹಲಿಯ 13,766 ಮತಗಟ್ಟೆಗಳಲ್ಲಿ 1.56 ಕೋಟಿ ಮತದಾರರು ತಮ್ಮ ಮತ ಚಲಾಯಿಸಲು ಅರ್ಹರಾಗಿದ್ದಾರೆ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.