ದೆಹಲಿಯಲ್ಲಿ ವಾಯು ಗುಣಮಟ್ಟ ಕುಸಿದಿದೆ
ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಭಾನುವಾರವೂ ದಟ್ಟವಾದ ಹೊಗೆ ಹಾಗೂ ಮಂಜು ಮುಸುಕಿದ ವಾತಾವರಣ ಮುಂದುವರಿದಿದೆ.
ಮಾಲಿನ್ಯದ ನಡುವೆಯೇ ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ದೆಹಲಿ ಸುತ್ತಲಿನ ಪ್ರದೇಶಗಳಲ್ಲಿ ಕೃಷಿ ಜಮೀನಲ್ಲಿ ಕೂಳೆ ಸುಡುತ್ತಿರುವ ಪ್ರಮಾಣವು ಗಮನಾರ್ಹ ಮಟ್ಟದಲ್ಲಿರುವ ಕಾರಣ, ಗಾಳಿಯ ಗುಣಮಟ್ಟ ಮತ್ತಷ್ಟು ಕುಸಿಯುತ್ತಿದೆ.
ದೆಹಲಿಯ ಕನಿಷ್ಠ ತಾಪಮಾನವು ಇಂದು 20.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಈ ಋತುವಿನ ಸರಾಸರಿಗಿಂತ 2.2 ಡಿಗ್ರಿಯಷ್ಟು ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಬೆಳಿಗ್ಗೆ 9 ಗಂಟೆಗೆ 284ರಷ್ಟು ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶಗಳು ದೃಢಪಡಿಸಿವೆ.
ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ ‘ಉತ್ತಮ‘ ಎಂದು, 51ರಿಂದ 100ರಷ್ಟಿದ್ದರೆ ‘ಸಮಾಧಾನಕರ’, 101 ರಿಂದ 200ರಷ್ಟಿದ್ದರೆ ‘ಸಾಧಾರಣ’, 201 ರಿಂದ 300ರಷ್ಟಿದ್ದರೆ ‘ಕಳಪೆ’ ಹಾಗೂ 301ರಿಂದ 400ರಷ್ಟಿದ್ದರೆ ‘ಅತ್ಯಂತ ಕಳಪೆ’ ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ ‘ತೀವ್ರ ಕಳಪೆ’ ಹಾಗೂ 450ಕ್ಕಿಂತ ಹೆಚ್ಚಾದರೆ ‘ತೀವ್ರಕ್ಕಿಂತಲೂ ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ.
ದೆಹಲಿಯಲ್ಲಿರುವ 38 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 12ರಲ್ಲಿ ಎಕ್ಯೂಐ ಪ‍್ರಮಾಣವು ಅತ್ಯಂತ ಕಳಪೆಯಾಗಿದೆ. ಆನಂದ್ ವಿಹಾರ್, ವಜೀರ್‌ಪುರ, ವಿವೇಕ್ ವಿಹಾರ್, ದ್ವಾರಕಾ, ಆರ್‌ಕೆ ಪುರಂ, ಸಿರಿ ಫೋರ್ಟ್, ದಿಲ್ಶಾದ್ ಗಾರ್ಡನ್ ಮತ್ತು ಜಹಾಂಗೀರ್‌ಪುರಿ, ಪಂಜಾಬಿ ಬಾಗ್, ನೆಹರು ನಗರ, ಅಶೋಕ್ ವಿಹಾರ್ ಮತ್ತು ಬವಾನಾದಲ್ಲಿ ವಾಯು ಗುಣಮಟ್ಟ ಅತಿ ಕಳಪೆ ಎಂದು ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.