
ದೆಹಲಿ ಸ್ಫೋಟ
ನವದೆಹಲಿ: ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಸಂಚುಕೋರ ಜೈಸಿರ್ ಬಿಲಾಲ್ ವಾನಿ ಎಂಬವವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶ್ರೀನಗರದಲ್ಲಿ ಇಂದು (ಶುಕ್ರವಾರ) ಬಂಧಿಸಿದೆ.
ಜೈಸಿರ್ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನ ಕಾಜಿಗುಂಡ ನಿವಾಸಿಯಾಗಿದ್ದು, ಭಯೋತ್ಪಾದಕ ದಾಳಿ ನಡೆಸಲು ತಾಂತ್ರಿಕ ನೆರವು ನೀಡಿದ ಆರೋಪ ಈತನ ಮೇಲಿದೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.
ಜೈಸಿರ್, 'ಆತ್ಮಾಹುತಿ ಬಾಂಬ್ ದಾಳಿಕೋರ' ಉಮರ್ ನಬಿಯೊಂದಿಗೆ ಸೇರಿ ಉಗ್ರ ದಾಳಿಗೆ ಸಂಚು ರೂಪಿಸುತ್ತಿದ್ದ ಎಂದು ತಿಳಿಸಿದೆ.
‘ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದಿದ್ದ ಜೈಸಿರ್‌ನನ್ನು ‘ಆತ್ಮಾಹುತಿ ಬಾಂಬರ್’ ಆಗುವಂತೆ ಉಮರ್ ಹಲವು ತಿಂಗಳುಗಳಿಂದ ಮನವೊಲಿಸಲು ಯತ್ನಿಸಿದ್ದ. ಆದರೆ ಜೈಸಿರ್ ಆತ್ಮಾಹುತಿ ಬಾಂಬರ್ ಆಗಲು ನಿರಾಕರಿಸಿದ್ದ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕುಲ್ಗಾಮ್‌ನ ಮಸೀದಿಯೊಂದರಲ್ಲಿ ‘ವೈದ್ಯರನ್ನು ಒಳಗೊಂಡ ಭಯೋತ್ಪಾದನೆ ಮಾದರಿ’ಯ ಸದಸ್ಯರನ್ನು ಭೇಟಿಯಾಗಿದ್ದ. ಅಲ್ ಫಲಾಹ್ ವಿಶ್ವವಿದ್ಯಾಲಯ ಸಮೀಪದ ಬಾಡಿಗೆ ಮನೆಗೂ ಜೈಸಿರ್‌ನನ್ನು ಕರೆದುಕೊಂಡು ಹೋಗಲಾಗಿತ್ತು’ ಎಂದು ತಿಳಿಸಿದೆ.
ನವೆಂಬರ್ 10ರ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ತನಿಖಾ ಸಂಸ್ಥೆಯ ಹಲವು ತಂಡಗಳು ಸಂಚುಕೋರರ ಬಂಧನಕ್ಕಾಗಿ ರಾಜ್ಯದಾದ್ಯಂತ ಶೋಧ ನಡೆಸುತ್ತಿದೆ.
ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರ ಅಮೀರ್ ರಶೀದ್ ಅಲಿನನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಐಎ ಅಧಿಕಾರಿಗಳು ಭಾನುವಾರ (ನ.16) ಬಂಧಿಸಿದ್ದರು. ಅಮೀರ್‌ನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ 10 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
ಕಾರನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ವೈದ್ಯ ಉಮರ್ ನಬಿ ಚಲಾಯಿಸಿದ್ದರು. ಆದರೆ ಸ್ಫೋಟಗೊಂಡ ಹ್ಯುಂಡೈ ಐ20 ಕಾರು ಅಮೀರ್ ಹೆಸರಿನಲ್ಲಿ ನೋಂದಣಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.