ಜೈರಾಮ್ ರಮೇಶ್
–ಪಿಟಿಐ ಚಿತ್ರ
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರ ನೀತಿಯ ಸಮರ್ಥನೆಯಲ್ಲ. ಬದಲು ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧ ಮತದಾರರು ತೀರ್ಪು ನೀಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಈ ಕುರಿತು ಕಾಂಗ್ರೆಸ್‌ನ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಸತತ ಮೂರನೇ ಬಾರಿಯೂ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಆದರೆ 2030ರಲ್ಲಿ ಅಧಿಕಾರಕ್ಕೆ ಬಂದು ಮತ್ತೆ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'2015 ಹಾಗೂ 2020ರಲ್ಲಿ ಪ್ರಧಾನಿ ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದಾಗಲೂ ಎಎಪಿ ದೆಹಲಿಯಲ್ಲಿ ನಿರ್ಣಾಯಕ ಜಯಭೇರಿ ಮೊಳಗಿಸಿತ್ತು. ಹಾಗಾಗಿ ಈ ಬಾರಿಯ ಫಲಿತಾಂಶದಲ್ಲಿ ಮೋದಿ ಅವರ ನೀತಿಗಳನ್ನು ಸಮರ್ಥಿಸುವ ಬದಲು ಈ ಜನಾದೇಶವು ಅರವಿಂದ ಕೇಜ್ರಿವಾಲ್ ಅವರ ಮೋಸ, ವಂಚನೆಯ, ಉತ್ಪ್ರೇಕ್ಷಿತ ಸಾಧನೆಗಳ ತಿರಸ್ಕಾರವಾಗಿದೆ' ಎಂದು ಅವರು ಹೇಳಿದ್ದಾರೆ.
'ಕಾಂಗ್ರೆಸ್ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಲ್ಲಿತ್ತು. ಆದರೂ ಮತಗಳಿಕೆಯನ್ನು ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ ಬಿರುಸಿನ ಪ್ರಚಾರ ನಡೆಸಿತ್ತು. ವಿಧಾನಸಭೆಯಲ್ಲಿ ಶಾಸಕರ ಬಲ ಇಲ್ಲದಿರಬಹುದು. ಆದರೆ ದೆಹಲಿಯಲ್ಲಿ ಪಕ್ಷದ ಉಪಸ್ಥಿತಿಯಿದೆ. ಲಕ್ಷಗಟ್ಟಲೆ ಕಾರ್ಯಕರ್ತರ ನಿರಂತರ ಪ್ರಯತ್ನದಿಂದ 2030ರಲ್ಲಿ ಮತ್ತೆ ಸರ್ಕಾರ ರಚಿಸಲಿದೆ' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.