ADVERTISEMENT

ಸಾಮೂಹಿಕ ಅತ್ಯಾಚಾರ, ಕೊಲೆ?: ಠಾಕ್ರೆ, ಇತರರ ನಾರ್ಕೊ ಟೆಸ್ಟ್‌ ನಡೆಸಿ; ದಿಶಾ ತಂದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2025, 2:33 IST
Last Updated 28 ಮಾರ್ಚ್ 2025, 2:33 IST
Venugopala K.
   Venugopala K.

ಮುಂಬೈ: ನನ್ನ ಮಗಳಿಗೆ ನ್ಯಾಯ ಕೊಡಿ ಎಂದು ಒತ್ತಾಯಿಸಿರುವ ದಿಶಾ ಸಾಲಿಯನ್ ಅವರ ತಂದೆ ಸತೀಶ್ ಸಾಲಿಯನ್, ಶಿವಸೇನೆಯ (ಯುಬಿಟಿ ನಾಯಕ) ಆದಿತ್ಯ ಠಾಕ್ರೆ, ನಟರಾದ ಸೂರಜ್ ಪಾಂಚೋಲಿ ಮತ್ತು ಡಿನೊ ಮೋರಿಯಾ ಸೇರಿದಂತೆ ಎಲ್ಲ ಆರೋಪಿಗಳಿಗೆ ನಾರ್ಕೊ ಪರೀಕ್ಷೆಗಳನ್ನು ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ತಮಗೆ ಮತ್ತು ತಮ್ಮ ವಕೀಲರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ ಅವರು, ಪ್ರಕರಣದಲ್ಲಿ ತಾರ್ಕಿಕ ಅಂತ್ಯಕ್ಕಾಗಿ ಹೋರಾಡುವುದಾಗಿ ಹೇಳಿದ್ದಾರೆ.

‘ನನ್ನ ಮಗಳಿಗೆ ನ್ಯಾಯ ಒದಗಿಸುವಂತೆ ಮುಂಬೈ ಪೊಲೀಸ್ ಅಧಿಕಾರಿಗಳನ್ನು ನಾನು ಒತ್ತಾಯಿಸಿದ್ದೇನೆ. ಈ ಪ್ರಕರಣದಲ್ಲಿ ಪ್ರಭಾವಿಗಳ ಪಾತ್ರ ಇರುವುದರಿಂದ ನನ್ನ ಮತ್ತು ನನ್ನ ವಕೀಲರಿಗೂ ರಕ್ಷಣೆ ನೀಡಬೇಕೆಂದು ಕೋರಿದ್ದೇನೆ. ನಾನೂ ನಾರ್ಕೊ ಪರೀಕ್ಷೆಗೆ ಸಿದ್ಧನಿದ್ದೇನೆ. ಆದರೆ, ಆದಿತ್ಯ ಠಾಕ್ರೆ, ಸೂರಜ್ ಪಾಂಚೋಲಿ ಮತ್ತು ಡಿನೊ ಮೋರಿಯಾ ಅವರಿಗೂ ನಾರ್ಕೊ ಪರೀಕ್ಷೆ ನಡೆಯಬೇಕು’ಸತೀಶ್ ಎಂದು ಆಗ್ರಹಿಸಿದ್ದಾರೆ.

ADVERTISEMENT

ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಾಣದ ಬಗ್ಗೆ ಅವರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದು, ಮಹಾ ವಿಕಾಸ್ ಅಘಾಡಿ ನೇತೃತ್ವದ ಹಿಂದಿನ ಸರ್ಕಾರವು ತನ್ನ 2.5 ವರ್ಷಗಳ ಅವಧಿಯಲ್ಲಿ ನಿಷ್ಕ್ರಿಯವಾಗಿತ್ತು ಎಂದು ಹೇಳಿದ್ದಾರೆ.

ಎಂವಿಎ 2.5 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಬಳಿಕ, ಎಸ್‌ಐಟಿಯನ್ನು ಸ್ಥಾಪಿಸಲಾಯಿತು. ಆದರೆ, ಅವರು ಏನನ್ನೂ ಮಾಡಲಿಲ್ಲ. ನಂತರ, ನಾನು ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಬೇಕಾಯಿತು. ನಮಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂದು ಸತೀಶ್ ಹೇಳಿದ್ದಾರೆ.

ನ್ಯಾಯಾಂಗದ ಮೇಲಿನ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದ ಅವರು, ನ್ಯಾಯ ಸಿಗುವವರೆಗೂ ತಾನು ವಿಶ್ರಮಿಸುವುದಿಲ್ಲ ಎಂದು ಹೇಳಿದ್ದಾರೆ.

ದಿಶಾ ಹಠಾತ್ ನಿಧನದ ಐದು ವರ್ಷಗಳ ನಂತರ ತಮ್ಮ ಮಗಳ ಹತ್ಯೆ ಪ್ರಕರಣದ ತನಿಖೆಯನ್ನು ಪುನರ್ ಆರಂಭಿಸುವಂತೆ ಹೊಸ ದೂರು ದಾಖಲಿಸಿದ್ದಾರೆ. ಬಳಿಕ, ಮುಂಬೈ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದಾರೆ.

ಅಲ್ಲದೆ, ವಕೀಲ ನಿಲೇಶ್ ಸಿ ಓಜಾ, ಜಂಟಿ ಆಯುಕ್ತರಾದ ಲಕ್ಷ್ಮಿ ಗೌತಮ್ ಅವರನ್ನು ಭೇಟಿಯಾಗಿ ದಿಶಾ ಸಾಲಿಯಾನ್ ಹತ್ಯೆ ಪ್ರಕರಣದಲ್ಲಿ ದಾಖಲಾಗಿರುವ ದೂರಿನ ಕುರಿತು ಚರ್ಚಿಸಿದರು.

ಆದಿತ್ಯ ಠಾಕ್ರೆ, ಸೂರಜ್ ಪಂಚೋಲಿ, ಡಿನೊ ಮೊರಿಯಾ ಮತ್ತು ಆದಿತ್ಯ ಠಾಕ್ರೆ ಅವರ ಅಂಗರಕ್ಷಕ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ದಾಖಲಾಗಿರುವ ದೂರಿನ ತನಿಖೆ 15 ತಿಂಗಳಿನಿಂದ ಸ್ಥಗಿತಗೊಂಡಿದೆ.

ಸೆಲೆಬ್ರಿಟಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿ ಗುರುತಿಸಿಕೊಂಡಿದ್ದರು.

2020ರ ಜೂನ್ 8 ರಂದು ದಿಶಾ, ಮುಂಬೈನ ಮಲಾಡ್‌ನಲ್ಲಿರುವ ವಸತಿ ಕಟ್ಟಡದ 14ನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದರು. 2023ರಲ್ಲಿ, ಮುಂಬೈ ಪೊಲೀಸರ ವಿಶೇಷ ತನಿಖಾ ತಂಡ ಇದು ಆಕಸ್ಮಿಕ ಸಾವು ಎಂದು ತನಿಖಾ ವರದಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.