ADVERTISEMENT

ಮಧ್ಯಪ್ರದೇಶ: ಸಿರಪ್‌ನಲ್ಲಿ ಅಪಾಯಕಾರಿ ರಾಸಾಯನಿಕ ನಂತರ, ಈಗ ಔಷಧದಲ್ಲಿ ಹುಳು ಪತ್ತೆ

ಪಿಟಿಐ
Published 16 ಅಕ್ಟೋಬರ್ 2025, 7:29 IST
Last Updated 16 ಅಕ್ಟೋಬರ್ 2025, 7:29 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಗ್ವಾಲಿಯರ್: ಅಪಾಯಕಾರಿ ರಾಸಾಯನಿಕ ಹೊಂದಿದ್ದ ಕೆಮ್ಮಿನ ಸಿರಪ್‌ ಸೇವಿಸಿ ಮಧ್ಯಪ್ರದೇಶ 20 ಮಕ್ಕಳು ಮೃತಪಟ್ಟ ಘಟನೆ ವರದಿಯಾದ ಬೆನ್ನಲ್ಲೇ, ಅದೇ ರಾಜ್ಯದ ಸರ್ಕಾರಿ ಆಸ್ಪತ್ರೆಗೆ ಪೂರೈಕೆಯಾದ ಔಷಧಗಳಲ್ಲಿ ಹುಳಗಳು ಪತ್ತೆಯಾಗಿ ಆತಂಕ ಸೃಷ್ಟಿಸಿದೆ. 

ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ನೀಡಿದ ಅಝಿತ್ರೋಮೈಸಿನ್‌ ಆ್ಯಂಟಿಬಯಾಟಿಕ್‌ ಔಷಧ ಬಾಟಿಲಿಯಲ್ಲಿ ಹುಳು ಪತ್ತೆಯಾಗಿದೆ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಗ್ವಾಲಿಯರ್‌ನ ಮೊರಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ಇದೇ ಮಾದರಿಯ ಔಷಧಿಯ ಬಾಟಲಿಗಳನ್ನು ವಶಕ್ಕೆ ಪಡೆದು, ಭೋಪಾಲ್‌ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಯಾವುದೇ ರೀತಿ ಸೋಂಕಿನಿಂದ ಮಕ್ಕಳು ಬಳಲುತ್ತಿದ್ದರೆ ಅಝಿತ್ರೋಮೈಸಿನ್‌ ಆ್ಯಂಟಿಬಯಾಟಿಕ್‌ ಅನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಈ ಪ್ರಕರಣದಲ್ಲಿ ಮಗುವಿಗೆ ನೀಡಿದ ಔಷಧವು ಜೆನರಿಕ್‌ ಆಗಿದ್ದು, ಅದನ್ನು ಮಧ್ಯಪ್ರದೇಶ ಮೂಲದ ಕಂಪನಿಯೊಂದು ತಯಾರಿಸಿದೆ.

‘ಔಷಧದಲ್ಲಿ ಹುಳು ಪತ್ತೆಯಾಗಿದೆ ಎಂದು ಮಗುವಿನ ತಾಯಿ ದೂರು ನೀಡಿದ್ದಾರೆ. ನಮಗೆ ನೀಡಿದ ಔಷಧ ಬಾಟಲಿಯ ಮುಚ್ಚುಳ ತೆರೆದಿತ್ತು. ಹೀಗಾಗಿ ತಕ್ಷಣ ಅದನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದೇ ಆಸ್ಪತ್ರೆಗೆ ಪೂರೈಕೆಯಾದ ಎಲ್ಲಾ 306 ಬಾಟಲಿಗಳನ್ನು ಕೂಡಲೇ ಹಿಂಪಡೆಯಲಾಗಿದೆ’ ಎಂದು ಔಷಧ ನಿಯಂತ್ರಕ ಅನುಭೂತಿ ಶರ್ಮಾ ತಿಳಿಸಿದ್ದಾರೆ.

‘ಕೆಲ ಮಾದರಿಗಳನ್ನು ಭೋಪಾಲ್‌ನಲ್ಲಿರುವ ಪ್ರಯೋಗಾಲಯಕ್ಕೆ ಹಾಗೂ ಇನ್ನೂ ಕೆಲ ಮಾದರಿಗಳನ್ನು ಕೋಲ್ಕತ್ತದಲ್ಲಿರುವ ಕೇಂದ್ರ ಔಷಧ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದಿದ್ದಾರೆ.

ಕಲಬೆರಕೆ ಕೋಲ್ಡ್‌ರಿಫ್‌ ಕೆಮ್ಮಿನ ಸಿರಪ್ ಸೇವಿಸಿ ಶಂಕಿತ ಮೂತ್ರಪಿಂಡ ವೈಫಲ್ಯದಿಂದ ಬಳಲಿದ 24 ಮಕ್ಕಳು ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಮೃತಪಟ್ಟಿವೆ. ಈ ಸರಣಿ ಸಾವಿನ ಬೆನ್ನಲ್ಲೇ ಭಾರತದಲ್ಲಿ ತಯಾರಾಗುವ ಕೋಲ್ಡ್‌ರಿಫ್‌, ರೆಸ್ಪಿಫ್ರೆಶ್‌ ಟಿಆರ್, ರಿಲೈಫ್‌ ಸಿರಪ್‌ಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿಗೆ ಎಚ್ಚರಿಕೆ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.