ADVERTISEMENT

ಕರ್ನಾಟಕದಲ್ಲಿ ಹೊಸ ಇವಿಎಂಗಳ ಬಳಕೆ: ಚುನಾವಣಾ ಆಯೋಗ

ದಕ್ಷಿಣ ಆಫ್ರಿಕಾದಲ್ಲಿ ಬಳಸಲಾಗಿತ್ತು ಎಂಬ ಕಾಂಗ್ರೆಸ್‌ ಆರೋಪ ತಿರಸ್ಕರಿಸಿದ ಚುನಾವಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 11 ಮೇ 2023, 15:09 IST
Last Updated 11 ಮೇ 2023, 15:09 IST
-
-   

ನವದೆಹಲಿ: ಕರ್ನಾಟಕ ವಿಧಾನಸಭೆಗೆ ಮೇ 10ರಂದು ನಡೆದ ಚುನಾವಣೆಯಲ್ಲಿ ಬಳಸಲಾದ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಈ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಉಪಯೋಗಿಸಲಾಗಿತ್ತು ಎಂಬ ಕಾಂಗ್ರೆಸ್‌ ಪಕ್ಷದ ಆರೋಪವನ್ನು ಚುನಾವಣಾ ಆಯೋಗ ಗುರುವಾರ ತಳ್ಳಿಹಾಕಿದೆ.

ಈ ಕುರಿತು ಪಕ್ಷದ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಪತ್ರ ಬರೆದಿರುವ ಆಯೋಗ, ‘ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್‌ ಇಂಡಿಯಾ ಲಿಮಿಟೆಡ್ (ಇಸಿಐಎಲ್) ತಯಾರಿಸಿರುವ ಹೊಸ ಇವಿಎಂ ಗಳನ್ನು ಕರ್ನಾಟಕದಲ್ಲಿ ನಡೆದ ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ’ ಎಂದು ವಿವರಿಸಿದೆ.

‘ಇವಿಎಂ ಗಳ ಕುರಿತಾಗಿ ತಪ್ಪು ಮಾಹಿತಿ ಹಬ್ಬಿಸುತ್ತಿರುವ ಮೂಲಗಳನ್ನು ಪಕ್ಷವು ಬಹಿರಂಗಪಡಿಸಬೇಕು. ಈ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಮೇ 15ರ ಸಂಜೆ 5 ಗಂಟೆ ಒಳಗೆ ಕಾಂಗ್ರೆಸ್ ದೃಢಪಡಿಸಬೇಕು’ ಎಂದೂ ಆಯೋಗ ಹೇಳಿದೆ.

ADVERTISEMENT

‘ಮತಯಂತ್ರಗಳನ್ನು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಿರಲಿಲ್ಲ. ಆ ರಾಷ್ಟ್ರವು ಚುನಾವಣೆಯಲ್ಲಿ ಮತ ಯಂತ್ರಗಳನ್ನು ಬಳಕೆ ಮಾಡುವುದೂ ಇಲ್ಲ’ ಎಂದು ಆಯೋಗ ಸ್ಪಷ್ಟಪಡಿಸಿದೆ.

‘ಇಸಿಐಎಲ್‌ ತಯಾರಿಸಿರುವ ಹೊಸ ಮತಯಂತ್ರಗಳನ್ನು ಮಾತ್ರ ಕರ್ನಾಟಕದಲ್ಲಿ ಬಳಕೆ ಮಾಡಲಾಗುತ್ತದೆ ಎಂಬ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಮಾಹಿತಿ ಇತ್ತು. ಇವಿಎಂ ಗಳ ಸಾಗಣೆ ಹಾಗೂ ಅವುಗಳ ಬಳಕೆಯ ಪ್ರತಿ ಹಂತದಲ್ಲಿಯೂ ಕಾಂಗ್ರೆಸ್‌ ಪ್ರತಿನಿಧಿಗಳು ಇದ್ದರು’ ಎಂದು ಆಯೋಗ ಹೇಳಿದೆ.

‘ದಕ್ಷಿಣ ಆಫ್ರಿಕಾದಲ್ಲಿ ಬಳಸಲಾಗಿದ್ದ ಮತಯಂತ್ರಗಳನ್ನೇ ಕರ್ನಾಟಕ ಚುನಾವಣೆಯಲ್ಲಿ ಮರು ಬಳಕೆ ಮಾಡಲಾಗುತ್ತಿದೆ’ ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿ ಕಾಂಗ್ರೆಸ್‌ ಪಕ್ಷವು ಮೇ 8ರಂದು ಆಯೋಗಕ್ಕೆ ಪತ್ರ ಬರೆದು, ಕೆಲ ಸ್ಪಷ್ಟೀಕರಣಗಳನ್ನು ಕೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.