ಪಟ್ನಾ: ಅಧಿಕೃತವಾಗಿ ನೀಡದಿದ್ದರೂ ತಾವು ಹೊಂದಿರುವುದಾಗಿ ಹೇಳಿಕೊಂಡಿರುವ ಮತದಾರರ ಗುರುತಿನ ಚೀಟಿಯನ್ನು (ಎಪಿಕ್ ಕಾರ್ಡ್) ತನಿಖೆಗಾಗಿ ಹಿಂದಿರುಗಿಸುವಂತೆ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರಿಗೆ ಚುನಾವಣಾ ಆಯೋಗವು ಸೂಚಿಸಿದೆ.
‘ನೀವು (ತೇಜಸ್ವಿ ಯಾದವ್) ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ... ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಅಧಿಕೃತವಾಗಿ ನೀಡಲಾಗಿಲ್ಲ ಎಂದು ಹೇಳಿದ್ದೀರಿ. ಈ ಕುರಿತು ವಿವರವಾದ ತನಿಖೆ ನಡೆಸುವ ಸಲುವಾಗಿ ಈಗ ನಿಮ್ಮ ಬಳಿ ಎಪಿಕ್ ಕಾರ್ಡ್ ಅನ್ನು ಕೂಡಲೇ ಹಿಂದಿರುಗಿಸಬೇಕು’ ಎಂದು ಚುನಾವಣಾ ಆಯೋಗವು ಪತ್ರದಲ್ಲಿ ಉಲ್ಲೇಖಿಸಿದೆ.
‘2020ರ ವಿಧಾನಸಭಾ ಚುನಾವಣೆ ವೇಳೆ ತೇಜಸ್ವಿ ಯಾದವ್ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿನ ಸಂಖ್ಯೆ ಮತ್ತು ಈಗಿರುವ ಎಪಿಕ್ ಕಾರ್ಡ್‌ನ ಸಂಖ್ಯೆ ಎರಡು ಒಂದೇ ಆಗಿದೆ. ಒಂದು ವೇಳೆ ತೇಜಸ್ವಿ ಅವರು ಇನ್ನೊಂದು ಸಂಖ್ಯೆಯ ಎಪಿಕ್ ಕಾರ್ಡ್ ಹೊಂದಿದ್ದರೆ, ಅದು ತನಿಖೆಯ ವಿಷಯವಾಗುತ್ತದೆ’ ಎಂದು ಚುನಾವಣಾ ಆಯೋಗವು ತಿಳಿಸಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಿ, ಚುನಾವಣಾ ಆಯೋಗವು ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯಲ್ಲಿ ತನ್ನ ಹೆಸರು ಕಾಣೆಯಾಗಿದೆ ಎಂದು ತೇಜಸ್ವಿ ಯಾದವ್ ಶನಿವಾರ ಆರೋಪಿಸಿದ್ದರು.
ಪತ್ರಿಕಾಗೋಷ್ಠಿಯೊಂದರಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಇಪಿಐಸಿ ನಂಬರ್ ನಮೂದಿಸಿ ಯಾದವ್ ತಮ್ಮ ವಿವರಗಳನ್ನು ಪರಿಶೀಲಿಸಲು ಮುಂದಾಗಿದ್ದರು. ಆದರೆ, ವೆಬ್‌ಸೈಟ್‌ನಲ್ಲಿ ಯಾವುದೇ ವಿವರ ಲಭ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಅವರು, ‘ನೋಡಿ ನನ್ನ ಹೆಸರು, ವಿವರವೇ ಸಿಗುತ್ತಿಲ್ಲ. ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಬದಲಾಯಿಸಲಾಗಿದೆ. ನಾನು ಚುನಾವಣೆಯಲ್ಲಿ ಹೇಗೆ ಸ್ಪರ್ಧಿಸಲಿ’ ಎಂದು ಆರೋಪಿಸಿದ್ದರು.
ಏತನ್ಮಧ್ಯೆ, ಬಿಹಾರದ ಆಡಳಿತಾರೂಢ ಎನ್‌ಡಿಎ ಸರ್ಕಾರದ ವಕ್ತಾರರಾದ ಅಜಯ್ ಅಲೋಕ್ (ಬಿಜೆಪಿ), ನೀರಜ್ ಕುಮಾರ್ (ಜೆಡಿಯು) ಮತ್ತು ರಾಜೇಶ್ ಭಟ್ (ಲೋಕ ಜನಶಕ್ತಿ ಪಕ್ಷ ರಾಮ್ ವಿಲಾಸ್) ಇತರರು ಸುದ್ದಿಗೋಷ್ಠಿ ನಡೆಸಿದ್ದು, ಎರಡು ಎಪಿಕ್ ಕಾರ್ಡ್‌ಗಳನ್ನು ಹೊಂದಿದ್ದಕ್ಕಾಗಿ ತೇಜಸ್ವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.