ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಚುನಾವಣಾ ಆಯೋಗ
–ಪಿಟಿಐ ಚಿತ್ರಗಳು
ನವದೆಹಲಿ: 2024ರ ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮದ ಆರೋಪಗಳ ಕುರಿತು ಕೇಂದ್ರ ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಸಂಸತ್ತು ಅಂಗೀಕರಿಸಿದ ಕಾನೂನುಗಳು ಮತ್ತು ನಿಯಮಗಳ ಪ್ರಕಾರವೇ ಎಲ್ಲಾ ಚುನಾವಣೆಗಳನ್ನು ಕಟ್ಟುನಿಟ್ಟಾಗಿ ನಡೆಸಲಾಗಿದೆ ಎಂದು ತಿಳಿಸಿದೆ.
ರಾಜಕೀಯ ಪಕ್ಷಗಳಿಂದ ನೇಮಿಸಲ್ಪಟ್ಟ ಬೂತ್ ಮಟ್ಟದ ಏಜೆಂಟ್‌ಗಳು ಸೇರಿದಂತೆ ಸಾವಿರಾರು ಸಿಬ್ಬಂದಿಯನ್ನು ಒಳಗೊಂಡ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಬಗ್ಗೆ ಚುನಾವಣಾ ಆಯೋಗವು ವಿವರಿಸಿದೆ.
ಪ್ರಮುಖ ದಿನಪತ್ರಿಕೆಯಲ್ಲಿನ ರಾಹುಲ್ ಗಾಂಧಿಯವರ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗವು ಜೂನ್ 12ರಂದು ರಾಹುಲ್ ಗಾಂಧಿ ಅವರಿಗೆ ಇ–ಮೇಲ್ ಮೂಲಕ ಪತ್ರವೊಂದನ್ನು ರವಾನಿಸಿದೆ.
ಇಡೀ ಚುನಾವಣಾ ಪ್ರಕ್ರಿಯೆಯನ್ನು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ವಿಕೇಂದ್ರೀಕೃತ ರೀತಿಯಲ್ಲಿ ನಡೆಸಲಾಗುತ್ತದೆ. ಇದರಲ್ಲಿ 1,00,186ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು, 288 ಚುನಾವಣಾ ನೋಂದಣಿ ಅಧಿಕಾರಿಗಳು, 139 ಸಾಮಾನ್ಯ ವೀಕ್ಷಕರು, 41 ಪೊಲೀಸ್ ವೀಕ್ಷಕರು, 71 ವೆಚ್ಚ ವೀಕ್ಷಕರು ಮತ್ತು ಆಯೋಗದಿಂದ ನೇಮಿಸಲ್ಪಟ್ಟ 288 ರಿಟರ್ನಿಂಗ್ ಅಧಿಕಾರಿಗಳು ಇರುತ್ತಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮಹಾರಾಷ್ಟ್ರ ಚುನಾವಣೆ ವೇಳೆ 1,08,026 ಬೂತ್ ಮಟ್ಟದ ಏಜೆಂಟ್‌ಗಳನ್ನು ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳು ನೇಮಿಸಿದ್ದವು. ಈ ಪೈಕಿ 28,421 ಕಾಂಗ್ರೆಸ್ ಏಜೆಂಟ್‌ಗಳು ಇದ್ದರು.
ಕಾಂಗ್ರೆಸ್ ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಗಳಲ್ಲಿ ಚುನಾವಣೆಗಳನ್ನು ನಡೆಸುವ ಕುರಿತಾದ ಸಮಸ್ಯೆಗಳ ಕುರಿತು ಪ್ರಸ್ತಾಪಿಸಲಾಗಿದೆ. ಆದಾಗ್ಯೂ, ನಿಮಗೆ ಇನ್ನೂ ಯಾವುದೇ ಸಮಸ್ಯೆಗಳಿದ್ದರೆ, ನೀವು ನಮಗೆ ಪತ್ರ ಬರೆಯಬಹುದು ಮತ್ತು ಆಯೋಗವು ಎಲ್ಲಾ ಸಮಸ್ಯೆಗಳನ್ನು ಪರಸ್ಪರ ಚರ್ಚಿಸಲು ಅನುಕೂಲಕರ ದಿನಾಂಕ ಮತ್ತು ಸೂಕ್ತ ಸಮಯದಲ್ಲಿ ನಿಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಸಿದ್ಧವಾಗಿದೆ ಎಂದೂ ಚುನಾವಣಾ ಆಯೋಗ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.