ರಾಹುಲ್ ಗಾಂಧಿ
-ಪಿಟಿಐ ಚಿತ್ರ
ಪಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಮತ ಕಳ್ಳತನ ವಿರೋಧಿಸಿ ಲೋಕಸಭೆ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಇಂದು (ಭಾನುವಾರ) ‘ಮತದಾರನ ಅಧಿಕಾರ (ಮತದಾರರ ಹಕ್ಕು) ಯಾತ್ರೆ’ಯನ್ನು ಆರಂಭಿಸಿದ್ದಾರೆ.
ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬಿಹಾರದಲ್ಲಿ ‘ಮತ ಕಳ್ಳತನ’ ಮಾಡುವುದಕ್ಕೆ ಬಿಜೆಪಿಗರು ಮತ್ತು ಚುನಾವಣಾ ಆಯೋಗಕ್ಕೆ ಅವಕಾಶ ನೀಡುವುದಿಲ್ಲ. ಬಡವರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕರು ಚುನಾವಣಾ ಆಯೋಗವನ್ನು ಬಳಸಿಕೊಂಡು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವ ಮೂಲಕ ಹಲವು ಮತದಾರರ ಹೆಸರುಗಳನ್ನು ಅಳಿಸಿ ಹಾಕಿದೆ. ಜತೆಗೆ, ಹೊಸ ಮತದಾರರನ್ನು ಸೇರ್ಪಡೆ ಮಾಡುವ ಮೂಲಕ ‘ಮತ ಕಳ್ಳತನ’ ಮಾಡಲು ಪಿತೂರಿ ನಡೆಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ವೋಟ್ ಚೋರಿ’ (ಮತ ಕಳವು) ಕುರಿತು ಧ್ವನಿ ಎತ್ತಿದ ಬೆನ್ನಲ್ಲೇ ಅಫಿಡವಿಟ್ ಸಲ್ಲಿಸಲು ಚುನಾವಣಾ ಆಯೋಗ ನನ್ನನ್ನು ಕೇಳಿದೆ. ಆದರೆ, ಅಫಿಡವಿಟ್ ಸಲ್ಲಿಸುವ ಕುರಿತು ಬಿಜೆಪಿ ನಾಯಕರನ್ನು ಆಯೋಗ ಪ್ರಶ್ನಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
‘ದೇಶದಾದ್ಯಂತ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ. ನಮ್ಮದು ಸಂವಿಧಾನ ಉಳಿಸುವ ಹೋರಾಟವಾಗಿದ್ದರೆ, ಆರ್‌ಎಸ್‌ಎಸ್, ಬಿಜೆಪಿ ಸಂವಿಧಾನವನ್ನು ನಾಶಪಡಿಸಲು ಪ್ರಯತ್ನಿಸುತ್ತಿದೆ’ ಎಂದು ರಾಹುಲ್ ದೂರಿದ್ದಾರೆ.
‘ಮತದಾರರ ಅಧಿಕಾರ ಯಾತ್ರೆ’ಯು ಬಿಹಾರದ ಸಸಾರಾಮ್ನಿಂದ ಆರಂಭಗೊಂಡಿದ್ದು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ಹಲವು ನಾಯಕರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಈ ಯಾತ್ರೆಯು ಬಿಹಾರದಾದ್ಯಂತ 16 ದಿನಗಳು ನಡೆಯಲಿದೆ. 1,300 ಕಿ.ಮೀ ಸಾಗಲಿರುವ ಈ ಯಾತ್ರೆಯು ಸೆಪ್ಟೆಂಬರ್ 1ರಂದು ಪಾಟ್ನಾದಲ್ಲಿ ಸಮಾರೋಪಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.