ADVERTISEMENT

ಸಂಜಯ್‌ ರಾವುತ್‌ಗೆ ಇ.ಡಿ ಸಮನ್ಸ್: 'ತಲೆ ತೆಗೆದರೂ ಗುವಾಹಟಿ ದಾರಿ ಹಿಡಿಯೆನು'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜೂನ್ 2022, 8:37 IST
Last Updated 27 ಜೂನ್ 2022, 8:37 IST
ಶಿವಸೇನಾ ಸಂಸದ ಸಂಜಯ್‌ ರಾವುತ್‌
ಶಿವಸೇನಾ ಸಂಸದ ಸಂಜಯ್‌ ರಾವುತ್‌   

ಮುಂಬೈ: ಶಿವಸೇನಾ ಸಂಸದ ಸಂಜಯ್‌ ರಾವುತ್‌ಗೆ ಜಾರಿ ನಿರ್ದೇಶನಾಯಲವು (ಇ.ಡಿ) ಸೋಮವಾರ ಸಮನ್ಸ್‌ ಜಾರಿ ಮಾಡಿದೆ. ಪತ್ರಾ ಚಾಲ್‌ ಭೂ ಹಗರಣ ಪ್ರಕರಣದ ಸಂಬಂಧ ಜೂನ್‌ 28ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಶಿವಸೇನಾ ಶಾಸಕರ ಒಂದು ಗುಂಪು ಮಹಾ ವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಬಂಡೆದ್ದು, ಗುವಾಹಟಿಯಲ್ಲಿ ತಂಗಿದ್ದಾರೆ. ಅದರಿಂದಾಗಿ ಸರ್ಕಾರದಲ್ಲಿ ಅಸ್ಥಿರತೆ ಉಂಟಾಗಿದೆ. ಈ ನಡುವೆ ಶಿವಸೇನಾದ ಪ್ರಮುಖ ನಾಯಕ ರಾವುತ್‌ಗೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಮನ್ಸ್‌ ನೀಡಲಾಗಿದೆ.

₹1,034 ಕೋಟಿ ಪತ್ರಾ ಚಾಲ್‌ ಭೂ ಹಗರಣದ ಸಂಬಂಧ ಇ.ಡಿ ಈ ಹಿಂದೆ, ಸಂಜಯ್ ರಾವುತ್‌ ಆಪ್ತರಾದ ಪ್ರವೀಣ್‌ ರಾವುತ್‌ ಅವರಿಗೆ ಸೇರಿದ ₹9 ಕೋಟಿ ಮೌಲ್ಯದ ಆಸ್ತಿ ಹಾಗೂ ಸಂಜಯ್‌ ರಾವುತ್‌ ಅವರ ಪತ್ನಿ ವರ್ಷಾ ಅವರಿಗೆ ಸೇರಿದ ₹2 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ. ಪ್ರವೀಣ್‌ ರಾವುತ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.

ADVERTISEMENT

ಸಮನ್ಸ್‌ ಕುರಿತು ಪ್ರತಿಕ್ರಿಯಿಸಿರುವ ಸಂಜಯ್‌ ರಾವುತ್‌, 'ಇ.ಡಿ ನನಗೆ ವಿಚಾರಣೆಗೆ ಕರೆದಿರುವ ಬಗ್ಗೆ ಈಗಷ್ಟೇ ತಿಳಿಯಿತು. ಒಳ್ಳೆಯದು! ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಬಾಳಾಸಾಹೇಬ್‌ ಅವರ ಶಿವಸೈನಿಕರಾದ ನಾವು ದೊಡ್ಡ ಯುದ್ಧದಲ್ಲಿ ಹೋರಾಡುತ್ತಿದ್ದೇವೆ. ನನ್ನನ್ನು ತಡೆಯುವ ನಿಟ್ಟಿನಲ್ಲಿ ಮಾಡಿರುವ ಪಿತೂರಿ ಇದಾಗಿದೆ. ನೀವು ನನ್ನ ತಲೆ ತೆಗೆದರೂ ಸರಿಯೇ, ನಾನು ಗುವಾಹಟಿ ದಾರಿ ಹಿಡಿಯುವುದಿಲ್ಲ. ನನ್ನನ್ನು ಬಂಧಿಸಿ. ಜೈ ಹಿಂದ್‌' ಎಂದಿದ್ದಾರೆ.

ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ, 'ಬಿಜೆಪಿ ಬಗೆಗೆ ಇ.ಡಿ ನಿಜವಾದ ಭಕ್ತಿ ತೋರುತ್ತಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.