ನವದೆಹಲಿ: ಕೇಂದ್ರ ಸರ್ಕಾರವು ಕಾನೂನು ಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ಬುಧವಾರ ಮುಂದಿನ ಐದು ವರ್ಷ ಅವಧಿಗೆ ನಿಷೇಧಿಸಿದೆ.
ಈ ಕಠಿಣ ಕ್ರಮವನ್ನು ಖಂಡಿಸಿರುವ ಎಐಎಂಐಎಂ ಅದ್ಯಕ್ಷ ಅಸಾದುದ್ದೀನ್ ಓವೈಸಿ, ದೇಶದಲ್ಲಿ ಈಗ ಪ್ರತಿಯೊಬ್ಬ ಮುಸ್ಲಿಮರನ್ನು ಬಂಧಿಸಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪಿಎಫ್‌ಐ ನಿಲುವಿಗೆ ನನ್ನ ವಿರೋಧವಿದೆ. ಆದರೆ ಪ್ರಜಾಪ್ರಭುತ್ವವನ್ನು ನಾನು ಬೆಂಬಲಿಸುತ್ತೇನೆ. ಪಿಎಫ್‌ಐ ಮೇಲೆ ಹೇರಿರುವ ನಿಷೇಧ ಬೆಂಬಲಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಅಪರಾಧ ಎಸಗಿರುವ ಕೆಲವು ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರೆ ಇಡೀ ಸಂಘಟನೆಯನ್ನು ನಿಷೇಧಿಸಬೇಕು ಎಂದಲ್ಲ. ಯಾರನ್ನಾದರೂ ಅಪರಾಧಿ ಎಂದು ನಿರ್ಣಯಿಸಲು ಸಂಘಟನೆಯೊಂದಿಗಿನ ಸಂಪರ್ಕ ಮಾತ್ರ ಸಾಕಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸಹ ಉಲ್ಲೇಖಿಸಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಫ್ಯಾಸಿಸಂ ಮತ್ತು ಚುನಾವಣಾ ನಿರಂಕುಶ ಪ್ರಭುತ್ವ ಸಮೀಪಿಸುತ್ತಿರುವುದಾಗಿ ಎಚ್ಚರಿಸಿರುವ ಒವೈಸಿ, ದೇಶದಲ್ಲಿ ಪ್ರತಿಯೊಬ್ಬ ಮುಸ್ಲಿಮರನ್ನು ಯುಎಪಿಎ ಅಡಿಯಲ್ಲಿ ಪಿಎಫ್‌ಐ ಕರಪತ್ರದೊಂದಿಗೆ ಬಂಧಿಸಬಹುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.