ಸುನಿಲ್ ಶೆಟ್ಟಿ
-ಪಿಟಿಐ ಚಿತ್ರ
ಮುಂಬೈ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತದಲ್ಲಿ ಪಾಕ್‌ನ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಡೆಹಿಡಿದಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬಾಲಿವುಡ್ ನಟ ಸುನಿಲ್ ಶೆಟ್ಟಿ ಬೆಂಬಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ದೇಶದ ಶಾಂತಿಯನ್ನು ಕದಡಲು ಮತ್ತು ಮುಗ್ಧ ಜನರನ್ನು ಕೊಲ್ಲಲು ಪ್ರಯತ್ನಿಸುವವರೊಂದಿಗೆ ಎಲ್ಲವನ್ನೂ ನಿಷೇಧಿಸಬೇಕು. ಅದು ಕಲೆಯಾದರೂ (ಮನರಂಜನೆ) ಸರಿ ಅಥವಾ ಕ್ರಿಕೆಟ್ ಆದರೂ ಸರಿ’ ಎಂದು ಹೇಳಿದ್ದಾರೆ.
‘ಪ್ರಧಾನಿ ಮೋದಿ ಅವರು ಸೇನೆಗೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ನೀಡಿದ್ದಾರೆ. ಸಮವಸ್ತ್ರದಲ್ಲಿರುವ ಸೈನಿಕರು ತಾವು ಮಾಡಬೇಕಾದ್ದನ್ನು ಮಾಡುತ್ತಾರೆಂದು ನಾನು ಭಾವಿಸುತ್ತೇನೆ’ ಎಂದು ಶೆಟ್ಟಿ ಭರವಸೆ ವ್ಯಕ್ತಪಡಿಸಿದ್ದಾರೆ.
‘ನಾವು ಧರ್ಮ, ಕರ್ಮ ಮತ್ತು ಸೇವೆ ಎಂದು ಹೇಳುವ ದೇಶದಲ್ಲಿದ್ದೇವೆ. ಜವಾಬ್ದಾರಿಯುತ ನಾಗರಿಕರಾಗಿ ನಾವು ಮಾಡಬೇಕಾಗಿರುವುದು ಇಷ್ಟೇ...ಯಾರಿಗೂ ದ್ವೇಷವನ್ನು ಹರಡಲು ಅವಕಾಶ ನೀಡದೆ, ಒಗ್ಗಟ್ಟಿನಿಂದ ಬದುಕೋಣ’ ಎಂದು ಸುನಿಲ್ ಶೆಟ್ಟಿ ತಿಳಿಸಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ದಾಳಿಯ ಬೆನ್ನಲ್ಲೇ ಉಭಯ ರಾಷ್ಟ್ರಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಕ್ ನಟ ಫವಾದ್ ಖಾನ್ ನಟಿಸಿರುವ 'ಅಬೀರ್ ಗುಲಾಲ್' ಚಿತ್ರವನ್ನು ಮೇ 9ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಈ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಅನುಮತಿಸುವುದಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.