ADVERTISEMENT

ಮೋದಿ ಎದುರಾಳಿ ನಾಮಪತ್ರ ತಿರಸ್ಕೃತ

ಬಿಎಸ್‌ಎಫ್‌ನಿಂದ ವಜಾಗೊಂಡಿದ್ದ ಯೋಧ ತೇಜ್ ಬಹಾದ್ದೂರ್ ಯಾದವ್

ಪಿಟಿಐ
Published 1 ಮೇ 2019, 19:11 IST
Last Updated 1 ಮೇ 2019, 19:11 IST
   

ವಾರಾಣಸಿ:ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ಕಣಕ್ಕೆ ಇಳಿದಿದ್ದ ಬಿಎಸ್‌ಪಿ–ಎಸ್‌ಪಿ ಅಭ್ಯರ್ಥಿ ಹಾಗೂ ಬಿಎಸ್‌ಎಫ್‌ನಿಂದ ವಜಾಗೊಂಡಿದ್ದಯೋಧ ತೇಜ್ ಬಹಾದ್ದೂರ್ ಯಾದವ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ತೇಜ್ ಅವರು ಪಕ್ಷೇತರಅಭ್ಯರ್ಥಿಯಾಗಿ ಮೊದಲು ನಾಮಪತ್ರ ಸಲ್ಲಿಸಿದ್ದರು. ನಂತರ ಎಸ್‌ಪಿ ಅಭ್ಯರ್ಥಿಯಾಗಿ ಮತ್ತೊಂದು ನಾಮಪತ್ರ ಸಲ್ಲಿಸಿದ್ದರು. ಎರಡೂ ನಾಮಪತ್ರಗಳ ವಿವರಗಳಲ್ಲಿ ವ್ಯತ್ಯಾಸವಿದೆ. ಈ ಸಂಬಂಧ ವಿವರಣೆ ನೀಡಿ ಎಂದು ವಾರಾಣಸಿಯ ಚುನಾವಣಾ ಅಧಿಕಾರಿ ಮಂಗಳವಾರ ಸಂಜೆ ನೋಟಿಸ್ ನೀಡಿದ್ದರು. ಬುಧವಾರ ಬೆಳಿಗ್ಗೆ 11ರ ಒಳಗೆ ವಿವರಣೆ ನೀಡುವಂತೆ ಸೂಚಿಸಿದ್ದರು.

ಆಯೋಗವು ಕೇಳಿದ್ದ ವಿವರಣೆಯನ್ನು ತೇಜ್ ಅವರು ಸಲ್ಲಿಸಿದ್ದರು. ಆದರೆ ವಿವರಣೆ ಸಮರ್ಪಕವಾಗಿಲ್ಲ ಎಂಬ ಕಾರಣವೊಡ್ಡಿ, ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ.ಇದಕ್ಕೆ ತೇಜ್ ಮತ್ತು ಸಮಾಜವಾದಿ ಪಕ್ಷದ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಗಡಿ ನಿಯಂತ್ರಣ ರೇಖೆ ಬಳಿ ಸೇವೆಯಲ್ಲಿರುವ ಬಿಎಸ್‌ಎಫ್ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗತ್ತಿದೆ ಎಂದು 2017ರಲ್ಲಿ ತೇಜ್ ಬಹಾದ್ದೂರ್ ಯಾದವ್ ಅವರು ಫೇಸ್‌ಬುಕ್‌ ಲೈವ್‌ ವಿಡಿಯೊ ಮೂಲಕ ಆರೋಪಿಸಿದ್ದರು. ಆನಂತರ ಅವರನ್ನು ಸೇವೆಯಿಂದ ಬಿಎಸ್ಎಫ್‌ ವಜಾ ಮಾಡಿತ್ತು.

ಕಾರಣ...
ಬಿಎಸ್‌ಎಆಫ್‌ನಿಂದ ವಜಾ ಆಗಿದ್ದು ಏಕೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಯನ್ನು ತೇಜ ಬಹಾದ್ದೂರ್ ಯಾದವ್ ತಮ್ಮ ಮೊದಲನೇ ನಾಮಪತ್ರದಲ್ಲಿ ಲಗತ್ತಿಸಿದ್ದರು. 2ನೇ ನಾಮಪತ್ರದಲ್ಲಿ ಆ ದಾಖಲೆ ಇರಲಿಲ್ಲ. ಸರ್ಕಾರಿ ಹುದ್ದೆಗಳಲ್ಲಿ ಇದ್ದವರು ನಾಮಪತ್ರದ ಜತೆ ನಿರಾಕ್ಷೇಪಣಾ ಪತ್ರ ಸಲ್ಲಿಸಬೇಕಾಗುತ್ತದೆ. ತೇಜ್ ಅವರು ಭ್ರಷ್ಟಾಚಾರದ ಆರೋಪದಲ್ಲಿ ವಜಾ ಆಗಿದ್ದರೆ ಅಥವಾ ಅಶಿಸ್ತಿನ ಕಾರಣಕ್ಕೆ ವಜಾ ಆಗಿದ್ದರೆ ಎಂಬುದರ ಬಗ್ಗೆ ಮಾಹಿತಿ ಅಗತ್ಯವಿದೆ. ಇವು ನಾಮಪತ್ರದಲ್ಲಿ ಇರಲಿಲ್ಲ. ಅದನ್ನು ಸಲ್ಲಿಸಲು ನೀಡಲಾಗಿದ್ದ ಕಾಲಾವಕಾಶವನ್ನು ಮೀರಿದ್ದಾರೆ ಎಂದು ಹೇಳಿದೆ.

*
ಅಸಲಿ ಚೌಕೀದಾರ್‌ನ ಎದುರು ಸ್ಪರ್ಧಿಸಲು ನಕಲಿ ಚೌಕೀದಾರ್‌ಗೆ (ಮೋದಿ) ಧೈರ್ಯವಿಲ್ಲ. ಹೀಗಾಗಿಯೇ ನನ್ನ ಸ್ಪರ್ಧೆಗೆ ತಡೆ ಒಡ್ಡುತ್ತಿದ್ದಾರೆ.
–ತೇಜ್ ಬಹಾದ್ದೂರ್ ಯಾದವ್, ಬಿಎಸ್‌ಎಫ್‌ನ ಮಾಜಿ ಯೋಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.