ADVERTISEMENT

Kerala Exit Poll 2021: ಕೇರಳದಲ್ಲಿ ಮರಳಿ ಬರಲಿದೆ ಪಿಣರಾಯಿ ಸರ್ಕಾರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 9:41 IST
Last Updated 30 ಏಪ್ರಿಲ್ 2021, 9:41 IST
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್    

ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಗುರುವಾರ ಎಂಟನೇ ಮತ್ತು ಕೊನೆಯ ಹಂತದ ಮತದಾನ ಮುಕ್ತಾಯವಾಗುವುದರೊಂದಿಗೆ ಪಂಚರಾಜ್ಯಗಳ ಮತದಾನ ಪ್ರಕ್ರಿಯೆ ಮಗಿದಿದೆ.

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಚುನಾವಣಾ ಪ್ರಕ್ರಿಯೆ ಮುಕ್ತಾಯದ ಬಳಿಕ ಮತದಾನೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಮೇ 2, ಭಾನುವಾರ ಮತಎಣಿಕೆ ನಡೆದು, ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

ಕೇರಳದಲ್ಲಿ ಈ ಬಾರಿ ಮತ್ತೆ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರ ಮರಳಿ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಹೀಗಾಗಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕೇರಳದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

ADVERTISEMENT

ಕೇರಳದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ 15ನೇ ವಿಧಾನಸಭೆಗೆ 140 ಸದಸ್ಯರ ಆಯ್ಕೆಗಾಗಿ ಮತದಾನ ನಡೆದಿತ್ತು. ಸಿಪಿಎಂ ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ನಡೆದಿತ್ತು.

2016ರ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಡಿಎಫ್ ಮೂರನೇ ಎರಡರಷ್ಟು ಮತಗಳಿಸಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ 47 ಮತ್ತು ಬಿಜೆಪಿ 1 ಸ್ಥಾನ ಗಳಿಸಿತ್ತು. ಓರ್ವ ಪಕ್ಷೇತರ ಅಭ್ಯರ್ಥಿ ಕೂಡ ಗೆಲುವು ಸಾಧಿಸಿದ್ದರು.

ಈ ಬಾರಿಯ ಸಮೀಕ್ಷೆ ಏನು ಹೇಳುತ್ತದೆ?

ಎಬಿಪಿ-ಸಿವೋಟರ್ ಸಮೀಕ್ಷೆ ಪ್ರಕಾರ ಕೇರಳದಲ್ಲಿ ಈ ಬಾರಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ 71-77 ಸ್ಥಾನ ಗಳಿಸಿದರೆ, ಕಾಂಗ್ರೆಸ್ ಯುಡಿಎಫ್ 62-68 ಮತ್ತು ಬಿಜೆಪಿ 0-2 ಸ್ಥಾನ ಗಳಿಸಲಿದೆ.

ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆ ಪ್ರಕಾರ, ಸಿಪಿಎಂ ನೇತೃತ್ವದ ಎಲ್‌ಡಿಎಫ್ 104-120 ಸ್ಥಾನ ಗಳಿಸಿದರೆ, ಕಾಂಗ್ರೆಸ್ ಯುಡಿಎಫ್ 20-36 ಮತ್ತು ಬಿಜೆಪಿ 0-2 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

ರಿಪಬ್ಲಿಕ್ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳಿರುವಂತೆ, ಸಿಪಿಎಂ ನೇತೃತ್ವದ ಎಲ್‌ಡಿಎಫ್ 72-80 ಸ್ಥಾನ ಗಳಿಸಿದರೆ, ಕಾಂಗ್ರೆಸ್ ಯುಡಿಎಫ್ 58-64 ಮತ್ತು ಬಿಜೆಪಿ 1-5 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದಿದೆ.

ಒಟ್ಟಾರೆ ಮೂರು ಪ್ರಮುಖ ಸಮೀಕ್ಷೆಗಳ ಪ್ರಕಾರ, ಕೇರಳದಲ್ಲಿ ಸಿಪಿಐಎಂ ನೇತೃತ್ವದ ಎಲ್‌ಡಿಎಫ್, ಪಿಣರಾಯಿ ವಿಜಯನ್ ಸರ್ಕಾರ ಮತ್ತೆ ಅಧಿಕಾರಕ್ಕೇರುವುದು ಖಚಿತ ಎನ್ನಲಾಗಿದೆ. ಅಲ್ಲದೆ, ಮುಂದಿನ ಸಿಎಂ ಯಾರಾಗಬೇಕೆಂಬ ಪ್ರಶ್ನೆಗೆ ಪಿಣರಾಯಿ ವಿಜಯನ್ ಸೂಕ್ತ ಎಂದು ಅತ್ಯಧಿಕ ಮಂದಿ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.